ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾನುವಾರ ರಾತ್ರಿ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸುರಿದ ಭೀಕರ ಬಿರುಗಾಳಿ ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, Crop damage due to untimely rains ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ Minister Krishna Bairegowda ಅವರಿಗೆ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ Dr. Dhananjaya Sarji ಅವರು ಭೇಟಿಯಾಗಿ ಹಾನಿಗೊಳಗಾದ ರೈತರಿಗೆ ವಿಶೇಷ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು.
ಗ್ರಾಮಾಂತರದ ಹೊಳೆಹೊನ್ನೂರು, ಆನವೇರಿ ಹಾಗೂ ಕಲ್ಲೀಹಾಳ ಹೋಬಳಿಗಳ ವ್ಯಾಪ್ತಿಯಲ್ಲಿ ವರುಣನ ಅಬ್ಬರಕ್ಕೆ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಈ ಮೂರು ಹೋಬಳಿಗಳ ವ್ಯಾಪ್ತಿಗೆ ಬರುವ ಸುಮಾರು 35ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ಷರಶಃ ಪ್ರಕೃತಿಯ ವಿಕೋಪವೇ ಸೃಷ್ಟಿಯಾಗಿದೆ. ಅಂದಾಜು 6 ಸಾವಿರ ಹೆಕ್ಟೇರ್‌ನಷ್ಟು ವಿಸ್ತಾರವಾದ ಪ್ರದೇಶದಲ್ಲಿ ಬೆಳೆಯಲಾಗಿದ್ದ ರೈತರ ಜೀವನಾಡಿ ಬೆಳೆಗಳಾದ ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕುರುಳಿವೆ.
ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ’ (ಬೆಳೆ ವಿಮೆ) ಅಡಿಯಲ್ಲಿರುವ ತಾಂತ್ರಿಕ ತೊಡಕುಗಳ ಬಗ್ಗೆ ಸಚಿವರ ಗಮನ ಸೆಳೆದ ಅವರು, ಪ್ರಸ್ತುತ ನಿಯಮಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸಿದರು.
“ಸಾಮಾನ್ಯವಾಗಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಮಳೆಗಾಲದ ಸಂದರ್ಭದಲ್ಲಿ ವಿಪರೀತ ಮಳೆಯಾಗಿ ಬೆಳೆ ಹಾನಿಯಾದರೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ 50,000 ರೂಪಾಯಿಗಳಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗೆ ಪರಿಹಾರ ಲಭ್ಯವಾಗುತ್ತದೆ. ಆದರೆ, ಪ್ರಸ್ತುತ ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಕಾಲ ಇರುವುದರಿಂದ ಅಕಾಲಿಕ ಮಳೆಯಾಗಿ ಹಾನಿ ಸಂಭವಿಸಿರುವುದರಿಂದ, ವಿಮಾ ನಿಯಮಾವಳಿಗಳ ಪ್ರಕಾರ ಎಕರೆಗೆ ಕೇವಲ ಐದು ಸಾವಿರ ರೂಪಾಯಿ ಮಾತ್ರ ಪರಿಹಾರ ದೊರೆಯುತ್ತದೆ. ಇದು ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿರುವ ರೈತರಿಗೆ ಯಾವುದೇ ರೀತಿಯಲ್ಲೂ ಪ್ರಯೋಜನಕಾರಿಯಲ್ಲ” ಆದ್ದರಿಂದ ರಾಜ್ಯ ಸರ್ಕಾರವು ರೈತರ ವಾಸ್ತವಿಕ ನಷ್ಟವನ್ನು ಅಂದಾಜಿಸಿ. ಪ್ರಸ್ತುತ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸಂಭವಿಸಿರುವ ಈ ಹಾನಿಯನ್ನು ಸರ್ಕಾರವು ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಘಟನೆಯನ್ನು “ಪ್ರಕೃತಿ ವಿಕೋಪ” ಎಂದು ಘೋಷಣೆ ಮಾಡಬೇಕು. ಆ ಮೂಲಕ ಮಳೆಗಾಲದಲ್ಲಿ ಸಿಗುವ ಮಾದರಿಯಲ್ಲೇ ಗರಿಷ್ಠ ಪರಿಹಾರವನ್ನು, ಅಥವಾ ವಿಮೆಯ ಹೊರತಾಗಿ ಸರ್ಕಾರದ ವಿಶೇಷ ಪರಿಹಾರ ನಿಧಿಯಿಂದ ಸೂಕ್ತ ಹಾಗೂ ನ್ಯಾಯಯುತ ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ಮನವಿ ಸಲ್ಲಿಸಿದರು
ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯಕ್, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ಹೇಮಂತ್ ಕುಮಾರ್, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















