ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೆಲ್ಮೆಟ್ Helmet ಧರಿಸದೇ ಬೈಕ್ ಚಲಾಯಿಸಿಕೊಂಡು ಬಂದು, ಅದನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸರ Traffic Police ಮೇಲೆಯೇ ವಾಗ್ವಾದ ನಡೆಸಿ, ಬೆದರಿಕೆ ಹಾಕಿ ಆರೋಪದಲ್ಲಿ ನಗರದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸೈಯ್ಯದ್ ಮುಜಾಮಿಲ್ ಹಾಗೂ ಜಬಿವುಲ್ಲಾ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಮೇ 4ರ ನಿನ್ನೆ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್’ಐ ಮಂಜುನಾಥ್ ಹಾಗೂ ಸಿಪಿಸಿ ಸಂತೋಷ್ ಅವರು ಗಾಂಧಿ ಬಜಾರ್’ನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದರು. ಈ ವೇಳೆ ಆರೋಪಿಗಳು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿಕೊಂಡು, ಸಂಚಾರಿ ನಿಯಮ ಉಲ್ಲಂಘಿಸಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ.
Also read: ಹೊತ್ತಿ ಉರಿದ ಕೆಎಸ್’ಆರ್’ಟಿಸಿ ಬಸ್ | ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಜೀವ
ಪೊಲೀಸರು ತಡೆದ ಕಾರಣ ಬೈಕ್ ಚಲಾಯಿಸುತ್ತಿದ್ದ ಸೈಯ್ಯದ್ ಮುಜಾಮಿಲ್ ರಸ್ತೆ ಮಧ್ಯೆಯೇ ಬೈಕ್ ನಿಲ್ಲಿಸಿಕೊಂಡು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಈ ವೇಳೆ ಆತನಿಗೆ ಹೆಲ್ಮೆಟ್ ಧರಿಸಬೇಕಾದ ಮಹತ್ವದ ಬಗ್ಗೆ ಪೊಲೀಸರು ತಿಳಿ ಹೇಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಜಬಿವುಲ್ಲಾ ಎನ್ನುವವರು ನಾವು ಹೆಲ್ಮೆಟ್ ಹಾಕುವುದಿಲ್ಲ, ಏನು ಮಾಡುತ್ತೀಯಾ? ಎಂದು ಪ್ರಶ್ನಿಸಿ ಸಮವಸ್ತ್ರದಲ್ಲಿದ್ದ ಇಬ್ಬರು ಪೊಲೀಸರನ್ನು ತಳ್ಳಿದ್ದಾನೆ. ಅಲ್ಲದೇ, ಅವರಿಂದ ಬೈಕ್ ಕೀ ಕಿತ್ತುಕೊಂಡು ತೆಗೆದುಕೊಂಡು ಹೋಗಿದ್ದಾನೆ. ಅಲ್ಲದೇ, ನಿಮಗೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಸಹ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ 99/2026 ಕಲಂ 121(1), 132, 3(5) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















