ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆ.ವೆಂಕಟರಾಮ್ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಪದ್ಮಭೂಷಣ, ವಿ.ಹೊಸಹಳ್ಳಿ ಕೆ.ವೆಂಕಟರಾಮ್ ಅವರಿಗೆ ನಾಗರಿಕ ಸನ್ಮಾನ-ನಾದವಂದನೆ ಸಮಾರಂಭವನ್ನು ಮೇ 9-10ರಂದು ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ ಹಾಗೂ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ವಿ.ಶೃಂಗೇರಿ ಹೆಚ್.ಎಸ್.ನಾಗರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಅದರಲ್ಲೂ ವಯೋಲಿನ್ ವಾದನದಲ್ಲಿ ದೊಡ್ಡ ಹೆಸರಾಗಿದ್ದಾರೆ. ಭಾರತದ ಮಹಾನ್ ಸಂಗೀತಗಾರ ಪದ್ಮಭೂಷಣ ವಿ.ಲಾಲ್ಗುಡಿ ಜಿ. ಜಯರಾಮನ್ ಬಳಿ ಶಿಕ್ಷಣ ಕಲಿತವರು. ಅವರ ಮನೆಯ ಮಗನಂತೆ ಇದ್ದವರು. ಅವರ ಮೊದಲ ಕಛೇರಿಯೇ ಅಪಾರ ಮೆಚ್ಚುಗೆಗೆಗ ಪಾತ್ರವಾಗಿತ್ತು. ಶಿವಮೊಗ್ಗ ಸಮೀಪದ ಹೊಸಹಳ್ಳಿಯಂತಹ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಇವರು ದೇಶವಲ್ಲದೆ ಹೊರ ದೇಶಗಳಲ್ಲೂ ಕೂಡ ಸಂಗೀತ ಕಛೇರಿ ನಡೆಸಿ ಭಾರತೀಯ ಸಂಗೀತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲ ಅನೇಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗೆ ನಾವು ನಾಗರಿಕ ಸನ್ಮಾನ ಇಟ್ಟುಕೊಂಡಿರುವುದು ಹೆಮ್ಮೆಯಾಗಿದೆ ಎಂದರು.
ಮೇ9ರ ಸಂಜೆ 5ಗಂಟೆಗೆ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಉದ್ಘಾಟನಾ ಸಮಾರಂಭ ಇರುತ್ತದೆ. ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಪ್ರಾಂತಕಾರ್ಯವಾಹ ಟಿ. ಪಟ್ಟಾಭಿರಾಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.
ಮೇ.10ರಂದು ಬೆಳಿಗ್ಗೆ 9.30ಕ್ಕ ನಾವವಂದನೆ ಕಾರ್ಯಕ್ರಮ ಕುವೆಂಪು ರಂಗಮಂದಿರಲ್ಲಿ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರೆ, ಶಾಸಕರುಗಳಾದ ಚನ್ನಬಸಪ್ಪ, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಆನೂರು ಅನಂತಕೃಷ್ಣ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕೆ.ವೆಂಕಟರಾಮ್ ಅವರ ಶಿಷ್ಯರುಗಳಿಂದ ಲಾಲ್ಗುಡಿ ಪಾರಂಪರಿಕ ವಯೊಲಿನ್ ವಾದನ ಆಯೋಜಿಸಲಾಗಿದೆ. ಜೊತೆಗೆ ಈ ಎರಡೂ ದಿನಗಳಲ್ಲೂ ಸಂಗೀತ ಕಲಾರಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯವಾಗಿ ಮೇ10ರ ಸಂಜೆ 4.30ಕ್ಕೆ ಹೊಸಹಳ್ಳಿ ಕೆ.ವೆಂಕಟರಾಮ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುಂಚೆ ಹೊಸಹಳ್ಳಿ ಕೆ. ವೆಂಕಟರಾಮ್ ದಂಪತಿಗಳಿಗೆ ಮಂಗಳವಾದ್ಯ, ಸಂಗೀತ ಗಾಯನದೊಂದಿಗೆ ಡಿವಿಎಸ್ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಪ್ರಖ್ಯಾತ ವಯೋಲಿನ್ ವಾದಕ ಆರ್.ಕೆ.ಶ್ರೀರಾಮ್ ಕುಮಾರ್ ಭಾಗವಹಿಸುವರು ಎಂದರು.
ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಡಾ.ಪಿ.ನಾರಾಯಣ್ ಮಾತನಾಡಿ, ಹೊಸಹಳ್ಳಿ ಕೆ.ವೆಂಕಟರಾಮ್ ಅವರಿಗೆ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ. ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಕರ್ನಾಟಕದ ಮಹಾನ್ ಸಂಗೀತ ವಿದ್ವಾಂಸರೂ ಹೌದು. ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಂಡಿರುವುದು ನಮ್ಮ ಪುಣ್ಯ. ಈ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಸಾಗರ, ಶೃಂಗೇರಿ, ತೀರ್ಥಹಳ್ಳಿ, ಮತ್ತೂರು ಸೇರಿಂತೆ ಹಲವು ಸಂಘ-ಸಂಸ್ಥೆಗಳು ನಮ್ಮ ಜೊತೆ ಕೈಜೋಡಿಸಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಕೆ.ಕೇಶವಮೂರ್ತಿ, ನರೇಂದ್ರ ಜೆ., ಹೊಸಹಳ್ಳಿ ರಘುರಾಂ, ಅರವಿಂದ ಹೊಳ್ಳ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















