ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಾಸ ಸಾಹಿತ್ಯವು ಲೋಕಕ್ಕೆ ಬೆಳಕಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ Shri Sathyathmatheertha Swamiji ಹೇಳಿದರು.
ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ 9ನೇ ಸಮ್ಮೇಳನ, 2 ದಿನಗಳ ವಿಶ್ವ ಸಮಾವೇಶ ಮತ್ತು ವಿಚಾರಗೋಷ್ಠಿಯನ್ನು ಅಗ್ರಹಾರದ ದಿವಾನ್ ಪೂರ್ಣಯ್ಯ ಛತ್ರದಲ್ಲಿ ಶನಿವಾರ ಉದ್ಘಾಟಿಸಿ ಅವರು ಅಮೃತೋಪದೇಶ ನೀಡಿದರು.
ಜ್ಞಾನಿಗಳ, ಯತಿವರೇಣ್ಯರ, ಆಚಾರ್ಯ ಮಧ್ವರ ಮತ್ತು ಹರಿದಾಸರ ಸಂದೇಶ ಮತ್ತು ತತ್ವ ಚಿಂತನೆಗಳು ಸಮದಾಯದ ಎಲ್ಲೆಯನ್ನು ಮೀರಿ ವಿಶ್ವದ ಜನರ ಸಾಧನೆಗಳಿಗೆ ಪ್ರೇರಕವಾಗಿದೆ. ಬದುಕಿನ ಎಲ್ಲ ಸ್ತರಗಳನ್ನೂ ದಾಸ ಸಾಹಿತ್ಯ ಮುಟ್ಟಿದೆ.
Also read: ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು
ಹಾಗಿರುವಾಗ ದಾಸ ಸಾಹಿತ್ಯದ ಒಳಗಿನ ಹೂರಣವನ್ನು ಸವಿದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದಕ್ಕಾಗಿ ಸತ್ಯ ಸಂಕಲ್ಪ ಈ ಕ್ಷಣದಿಂದಲೇ ಆರಂಭವಾಗಬೇಕು. ಆಗ ಭಗವಂತ ಸಂತುಷ್ಟನಾಗುತ್ತಾನೆ ಎಂದರು. ದೇವರು ಎಲ್ಲರ ಒಳಗೆ ನಿಂತು ಸಾತ್ವಿಕ ಶಕ್ತಿಗಳನ್ನು ತುಂಬಿ ಸಾಧನೆ ಮಾಡಿಸುತ್ತಾನೆ. ಅದಕ್ಕೆ ನಮ್ಮ ಮನವನ್ನು ಅಣಿಗೊಳಿಸಿಕೊಳ್ಳಬೇಕು. ದಾಸರ ಒಂದೊಂದು ಪದಗಳೂ ಇದಕ್ಕೆ ಚೈತನ್ಯ ತುಂಬುವಂತೆ ಮಾಡಲು ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದವು ಕಳೆದ 9 ವರ್ಷಗಳಿಂದ ಅಹರ್ನಿಷಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾವಿರಾರು ಮಾತೆಯರಿಗೆ ದಾಸ ಸಾಹಿತ್ಯದ ದೀಕ್ಷೆ:
ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಅಧ್ಯಕ್ಷ, ಹಿರಿಯ ವಿದ್ವಾಂಸ ಕೊಪ್ಪಳ ಪ್ರಮೋದಾಚಾರ್ಯ ಪೂಜಾರ ಮಾತನಾಡಿ, ಸಾವಿರಾರು ಮಾತೆಯರಿಗೆ ದಾಸ ಸಾಹಿತ್ಯದ ದೀಕ್ಷೆಯನ್ನು ನೀಡುವ ಮೂಲಕ ಅಧ್ಯಯನ ಶೀಲತೆಯನ್ನು ಪ್ರೇರೇಪಿಸುವಲ್ಲಿ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ. ಸಾಗರದ ಆಚೆಗಿನ ಮಾತೆಯರೂ ಆನ್‌ಲೈನ್ ಪಾಠಗಳ ಮೂಲಕ ದಾಸ ಸಾಹಿತ್ಯದ ಪಠ್ಯ ಕ್ರಮಗಳ ಅಭ್ಯಾಸ ಮತ್ತು ಪರೀಕ್ಷೆಗಳನ್ನು ತೆಗೆದುಕೊಂಡು ಜ್ಞಾನ ವಿಸ್ತಾರಗೊಳಿಸಿಕೊಳ್ಳುತ್ತಿದ್ದಾರೆ. ಇಂದು ಇಲ್ಲಿ ಸಮಾವೇಶಗೊಂಡಿರುವ ಸಾವಿರಕ್ಕೂ ಹೆಚ್ಚು ಮಹಿಳೆಯರೇ ಇದಕ್ಕೆ ಸಾಕ್ಷಿ ಎಂದರು.
ವಿದ್ಯಾಲಯ ಕಳೆದ 9 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಆಸಕ್ತರನ್ನು ತನ್ನ ವ್ಯಾಪ್ತಿಯಲ್ಲಿ ಒಗ್ಗೂಡಿಸಿದ್ದು, 5 ಹಂತದ ಪರೀಕ್ಷೆ ನಡೆಸುವ ಮೂಲಕ ದಾಸ ಪರಂಪರೆಯನ್ನು ಪುನರುಜ್ಜೀವನ ಗೊಳಿಸುವ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಯಾವುದೇ ವಯೋಮಾನದ ಮಿತಿ ಇರಿಸಿಕೊಳ್ಳದೇ ದೊಡ್ಡ ಪ್ರಮಾಣದಲ್ಲಿ ದಾಸ ಸಾಹಿತ್ಯ ಪ್ರಚಾರ, ಪ್ರಸಾರ ಆಂದೋಲನ ನಡೆಸಲು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರೇ ಮುಖ್ಯ ಪ್ರೇರಕರಾಗಿದ್ದಾರೆಂದು ಪ್ರಮೋದಾಚಾರ್ಯ ಪೂಜಾರ ನುಡಿದರು.
ಹಿರಿಯ ವಿದ್ವಾಂಸರಾದ ಅನಂತಪುರ ರಾಧಾಕೃಷ್ಣಾಚಾರ್ಯ, ಧಾರವಾಡ ಕೇಶವಾಚಾರ್ಯ, ದಿವಾನ ಶಶಿ ಆಚಾರ್ಯ, ಅನಿರುದ್ಧಾಚಾರ್ಯ ಪಾಂಡುರಂಗಿ, ಪ್ರದ್ಯುಮ್ನಾಚಾರ್ಯ ವಿಜಯಪುರ, ಪ್ರಹ್ಲಾದಾಚಾರ್ಯ ಹನುಮಸಾಗರ ಮತ್ತಿತರರು ಹಾಜರಿದ್ದರು.
ಸಂವಾದ: ಸ್ಪರ್ಧೆಗಳು
ಎರಡು ದಿನದ ಸಮ್ಮೇಳನದಲ್ಲಿ ದಾಸರ ಕೀರ್ತನೆ, ಸುಳಾದಿ, ಉಗಾಭೋಗ ಕುರಿತ ಸಂವಾದ, ವಿಚಾರಗೋಷ್ಠಿ, ಪ್ರಬಂಧ ಸಮರ್ಪಣೆ, ಅಧಿಕ ಮಾಸದ ಅಂಗವಾಗಿ ಮಾತೆಯರಿಗೆ 33 ಸ್ಪರ್ಧೆಗಳು, ಹರಿಕಥಾಮೃತಸಾರ ಕೃತಿಯ ಪರೀಕ್ಷೆ, ಸರ್ವಮೂಲಗಳ ಪಾರಾಯಣ ಅನುವಾದ ಇತ್ಯಾದಿ ನಡೆದವು. ಭಾನುವಾರವೂ ವಿದ್ವಾಂಸರಿಂದ ವಿವಿಧ ಗೋಷ್ಠಿ ನಡೆಯಲಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಸಾಂಪ್ರದಾಯಿಕ ಸಮವಸ್ತ್ರದಲ್ಲಿ ಗಮನ ಸೆಳೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















