ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ Minister U T Khader ಅವರು ಬೆಂಗಳೂರಿನ ಜಯನಗರ ಸರ್ಕಾರಿ ಆಸ್ಪತ್ರೆಗೆ ಸರ್ಪ್ರೈಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವ್ಯವಸ್ಥೆ, ಸ್ವಚ್ಛತೆ ಹಾಗೂ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ಅವರು ಪರಿಶೀಲಿಸಿದರು.
ಸಿಬ್ಬಂದಿ ಕೊರತೆ, ಗೈರುಹಾಜರಿ ಮೇಲೆ ಗರಂ
ಪರಿಶೀಲನೆ ವೇಳೆ ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಸಚಿವರು ಗಮನಿಸಿದರು. ಅಲ್ಲದೆ, ಕರ್ತವ್ಯದಲ್ಲಿರಬೇಕಾದ ಕೆಲವರು ಗೈರುಹಾಜರಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಸಚಿವರು ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರಿಗೆ ಎಚ್ಚರಿಕೆ
ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್, “ಆಸ್ಪತ್ರೆಯ ನೈಜ ಪರಿಸ್ಥಿತಿ ತಿಳಿಯಲು ಈ ಸಮಯದಲ್ಲಿ ಭೇಟಿ ನೀಡಿದ್ದೇನೆ. ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಇವತ್ತು ಇಬ್ಬರು ವೈದ್ಯರು ಗೈರಾಗಿದ್ದರು. ಅವರಿಗೆ ಎಚ್ಚರಿಕೆ ನೀಡುತ್ತೇನೆ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಸೂಚಿಸುತ್ತೇನೆ” ಎಂದರು.
Also read: ಮತ್ತೊಬ್ಬ ಸಚಿವ ರಾಜೀನಾಮೆ? ರಾಮಲಿಂಗಾರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಅಸಮಾಧಾನ
ರಾತ್ರಿ ವೇಳೆ ಭೇಟಿ ನೀಡಿದ ಕಾರಣ
“ಬೆಳಿಗ್ಗೆ ಸಭೆಗಳು ಮತ್ತು ಇತರ ಕಾರ್ಯಗಳಿರುತ್ತವೆ. ಆದ್ದರಿಂದ ರಾತ್ರಿ ವೇಳೆ ಬಂದಿದ್ದೇನೆ. ಈ ಸಮಯದಲ್ಲಿ ನಿಜವಾದ ಪರಿಸ್ಥಿತಿ ತಿಳಿಯುತ್ತದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಎಷ್ಟು ಜನ ಬಂದರೂ ವೈದ್ಯರು ಸೇವೆ ನೀಡಲೇಬೇಕು” ಎಂದು ಸಚಿವರು ಹೇಳಿದರು.
ಖಾಸಗಿ ಆಂಬುಲೆನ್ಸ್ ಹಾವಳಿ ವಿಚಾರಣೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಹಾವಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಇಂದು ಇಲಾಖೆಯ ಪರಿಶೀಲನಾ ಸಭೆ ಇದೆ. ಆ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುತ್ತೇವೆ. ಸೂಕ್ತ ಸಲಹೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ವೈದ್ಯರಿಗೆ ನಿರ್ಭಯ ವಾತಾವರಣ ಸೃಷ್ಟಿಯಾಗಬೇಕು” ಎಂದು ಹೇಳಿದರು.
ಸಚಿವರ ಅಚ್ಚರಿ ಭೇಟಿ ಮೂಲಕ ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಸ್ಥಿತಿ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದೇ ಎಂಬುದು ಗಮನಾರ್ಹವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















