ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಳಿಕ ಭಿನ್ನಮತ ಮತ್ತು ಅಸಮಾಧಾನ ಬಹಿರಂಗವಾಗಿ ಹೊರಹೊಮ್ಮಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಹಿನ್ನೆಲೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ Ramalinga Reddy ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಾಯಕ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ K H Muniyappa ಅವರು ಕೂಡ ತಮ್ಮಗೆ ಹಂಚಿಕೆಯಾಗಿರುವ ಖಾತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯರಿಗೆ ಅನ್ಯಾಯ: ಮುನಿಯಪ್ಪ ಆಕ್ರೋಶ
ತಮಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿರುವುದನ್ನು ಪ್ರಶ್ನಿಸಿರುವ ಮುನಿಯಪ್ಪ, ಹೈಕಮಾಂಡ್ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಾನು ಮತ್ತು ರಾಮಲಿಂಗಾರೆಡ್ಡಿ ಇಬ್ಬರೂ ಏಳುರಿಂದ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆದರೂ ಖಾತೆ ಹಂಚಿಕೆಯಲ್ಲಿ ನಮ್ಮ ಹಿರಿತನವನ್ನು ಪರಿಗಣಿಸಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆ ಏನು?
ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ತಮಗೆ ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯನ್ನು ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. “ಸುಮಾರು ಒಂಬತ್ತು ಬಾರಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸಿರುವ ನನಗೆ ಆಹಾರ ಖಾತೆ ನೀಡಿರುವುದು ಸಮಂಜಸವಾಗಿಲ್ಲ. ನಾನು ಕೇಳಿದ್ದೇ ಕೃಷಿ ಅಥವಾ ಸಮಾಜ ಕಲ್ಯಾಣ ಖಾತೆ. ಈಗ ನೀಡಿರುವ ಜವಾಬ್ದಾರಿಯಿಂದ ನನಗೆ ತೃಪ್ತಿಯಿಲ್ಲ” ಎಂದು ಅವರು ಹೇಳಿದ್ದಾರೆ.
ಪಕ್ಷಕ್ಕೆ ಎಚ್ಚರಿಕೆ
ರಾಜ್ಯ ನಾಯಕತ್ವದ ನಡೆಗೆ ಮುನಿಯಪ್ಪ ಎಚ್ಚರಿಕೆ ನೀಡಿದ್ದು, ಹಿರಿಯರನ್ನು ಕಡೆಗಣಿಸುವ ಧೋರಣೆ ಮುಂದುವರಿದರೆ ಪಕ್ಷಕ್ಕೆ ಭವಿಷ್ಯದಲ್ಲಿ ಹಿನ್ನಡೆಯಾಗಲಿದೆ ಎಂದಿದ್ದಾರೆ. “ಹಿರಿತನಕ್ಕೆ ಆದ್ಯತೆ ನೀಡದಿದ್ದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಕಷ್ಟ ಎದುರಾಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಈಗಾಗಲೇ ದೆಹಲಿ ಮಟ್ಟದಲ್ಲಿ ಚರ್ಚೆ ನಡೆಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಪಕ್ಷದ ಒಳಗಿನ ಅಸಮಾಧಾನ ಬಹಿರಂಗವಾಗುತ್ತಿರುವುದು ಪಕ್ಷದ ಒಳರಾಜಕೀಯಕ್ಕೆ ಹೊಸ ತಿರುವು ನೀಡಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Minister KH Muniyappa should not hesitate to resign from the minister post, otherwise he will be taken for granted