ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಗಾಂಧಿ ಬಜಾರ್ 1ನೇ ಕ್ರಾಸ್ ಸಮೀಪದ ಕರಿದೇವರ ಕೇರಿ ಹಾಗೂ ಲಷ್ಕರ್ ಮೊಹಲ್ಲಾ ಪ್ರದೇಶದಲ್ಲಿ ರೌಡಿಶೀಟರ್ ನರಸಿಂಹ (39) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗೋವಿಂದಪುರ ಆಶ್ರಯ ಬಡಾವಣೆ ನಿವಾಸಿಯಾಗಿದ್ದ ನರಸಿಂಹನ ಮೇಲೆ, ವಾಹನದಲ್ಲಿ ಬಂದ ನಾಲ್ಕೈದು ಜನರಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದರೆಂದು ತಿಳಿದುಬಂದಿದೆ.
Also Read>> ಗ್ರಾಮೀಣ ಸೇವೆಗೆ ಗೈರು: 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ ₹15 ಲಕ್ಷ ದಂಡ
ಮನೆಯೊಂದರ ಒಳಗೆ ನುಗ್ಗಿದ ಆರೋಪಿಗಳು, ಮನಸೋಯಿಚ್ಛೆ ದಾಳಿ ನಡೆಸಿ ತಲೆ ಹಾಗೂ ಕೈ ಭಾಗಗಳಿಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ದಾಳಿಯ ಭೀಕರತೆಗೆ ನರಸಿಂಹನ ಕೈಗಳು ತುಂಡಾಗಿದ್ದು, ಮುಖ ಗುರುತು ಸಿಗದಂತಾಗಿದೆ. ಘಟನೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಸ್ಥಳೀಯ ಮಾಹಿತಿ ಪ್ರಕಾರ, ಆ ಮನೆಯೊಳಗೆ ಅನಧಿಕೃತವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವೇಳೆ ದುಷ್ಕರ್ಮಿಗಳು ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಹಳೆಯ ವೈಷಮ್ಯ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮತ್ತೊಂದು ರೌಡಿ ತಂಡ ಈ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರಿಯಪ್ಪ ಹಾಗೂ ಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















