ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಯುವತಿ ಮನೆಯ ಆವರಣದಲ್ಲಿ ವಿಷಪೂರಿತ ಹಾವನ್ನು ಬಿಡಿಸಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನ್ಯೂ ಕಾಲೋನಿ ನಿವಾಸಿಗಳಾದ ಕಿಶೋರ್ ಮತ್ತು ಜಯಂತ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ನ್ಯೂಟೌನ್ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
Also Read>> ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಒತ್ತಾಯಿಸಿ ಜೂ.20ರಂದು ಪ್ರತಿಭಟನೆ
ಕಾರ್ಪೊರೇಟ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಜನ್ನಾಪುರದಲ್ಲಿರುವ ತನ್ನ ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ ಇಬ್ಬರು ಮುಸುಕುಧಾರಿಗಳು ಮನೆಯ ಕಾಂಪೌಂಡ್ ಒಳಗೆ ಪ್ರವೇಶಿಸುವುದನ್ನು ಯುವತಿ ಕಿಟಕಿಯಿಂದ ಗಮನಿಸಿದ್ದಾರೆ. ನಂತರ ಅವರು ಮನೆಯ ಆವರಣದಲ್ಲಿ ವಿಷಹಾವನ್ನು ಬಿಡುವುದನ್ನು ಕಂಡು ಬೆಚ್ಚಿಬಿದ್ದ ಯುವತಿ ಕಿರುಚಾಡಿದ್ದಾರೆ. ಈ ವೇಳೆ ಆರೋಪಿಗಳು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಯುವತಿಯ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಯುವತಿಯ ಪ್ರೀತಿ ನಿರಾಕರಣೆಯಿಂದ ಕೋಪಗೊಂಡ ಪ್ರಮುಖ ಆರೋಪಿ ಕೊಲೆ ಯತ್ನಕ್ಕೆ ಸಂಚು ರೂಪಿಸಿದ್ದಾನೆ ಎಂಬುದು ತಿಳಿದುಬಂದಿದೆ. ತನ್ನ ಸ್ನೇಹಿತರ ಮೂಲಕ ಮನೆಯ ಆವರಣದಲ್ಲಿ ಹಾವು ಬಿಡುವಂತೆ ಸೂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಚೀಲದಲ್ಲಿ ತಂದಿದ್ದ ದೊಡ್ಡ ವಿಷಕಾರಿ ಹಾವನ್ನು ಮನೆಯೊಳಗೆ ಬಿಟ್ಟು ಹೋಗಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸಂಬಂಧ ಯುವತಿಯ ಪೋಷಕರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ


















