ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸಂಚಾರ ವೃತ್ತ ಕಚೇರಿಯಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಎಲ್ಲಾ ಪಿಯು ಮತ್ತು ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರು/ಪ್ರಾಂಶುಪಾಲರ ಸಭೆಯನ್ನು ಆಯೋಜಿಸಲಾಗಿತ್ತು.
ಶಿವಮೊಗ್ಗ ‘ಬಿ’ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಸಭೆಯಲ್ಲಿ ಭಾಗವಹಿಸಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಈ ಕೆಳಕಂಡಂತೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು
- ಶಾಲಾ/ಕಾಲೇಜು ವಾಹನಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಶಾಲಾ/ಕಾಲೇಜು ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿರುವಂತೆ ಖಚಿತಪಡಿಸಿಕೊಳ್ಳಬೇಕು.
- ಶಾಲಾ/ಕಾಲೇಜು ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಕಾಲೇಜುಗಳ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.
- ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ವಾಹನ ಚಲಾಯಿಸಿಕೊಂಡು ಕಾಲೇಜಿಗೆ ಬರುತ್ತಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಪೋಷಕರ ಸಭೆಗಳನ್ನು ನಡೆಸಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡದಂತೆ ಅರಿವು ಮೂಡಿಸಬೇಕು.
- ಅಪ್ರಾಪ್ತ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ, ಅದರ ಫೋಟೋ, ವೀಡಿಯೊ ಹಾಗೂ ಸಂಬಂಧಿತ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ “Public Eye” ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿ ನೀಡಬೇಕು.
ಈ ಸಭೆಯ ಮೂಲಕ ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯನ್ನು ತಡೆಗಟ್ಟುವ ಕುರಿತು ಮಹತ್ವದ ಚರ್ಚೆಗಳೊಂದಿಗೆ ಮತ್ತು ರಸ್ತೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Comments 1