ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವ ಹಿಂದೂ ಪರಿಷತ್‌ನ ಧರ್ಮ ಪ್ರಸಾರ ವಿಭಾಗದ ವತಿಯಿಂದ ಆಯೋಜಿಸಲಾದ ‘ಮನೆ ಮನೆ ಹನುಮ’ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಾಪುರ ಮಹಾಪೀಠಂ, ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ಮಾರುತಿ ಗುರೂಜಿ ಅವರು ಚಾಲನೆ ನೀಡಿದರು.
ನಗರದ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹನುಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು, ವಿಶ್ವ ಹಿಂದೂ ಪರಿಷತ್‌ನ ಈ ಅಭಿಯಾನ ಯಶಸ್ವಿಯಾಗಿ ನಡೆಯಲಿ. ಪ್ರತಿ ಮನೆಯಲ್ಲೂ ಹನುಮನ ಆರಾಧನೆಯ ಮೂಲಕ ಸನಾತನ ಧರ್ಮದ ಆಚರಣೆ ಮತ್ತು ಜಾಗೃತಿ ಮತ್ತಷ್ಟು ವೃದ್ಧಿಯಾಗಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಮೈಸೂರಿನ ಪ್ರತಿಯೊಂದು ಮನೆಯಲ್ಲೂ ಯಾವುದೇ ಜಾತಿ-ಮತ, ಬೇಧಭಾವವಿಲ್ಲದೆ ಹನುಮನ ಪೂಜೆ ನಡೆಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
Also read: ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸರಿಗಮಪ’ ಆಡಿಷನ್ಸ್; ನಿಮ್ಮ ಗಾಯನಕ್ಕೆ ವೇದಿಕೆ ಸಿದ್ಧ!
ಧರ್ಮ ಪ್ರಸಾರ ವಿಭಾಗದ ಜಿಲ್ಲಾ ಅಧ್ಯಕ್ಷ ಪುನೀತ್ ಜಿ ಮಾತನಾಡಿ, ಸನಾತನ ಹಿಂದೂ ಧರ್ಮದ ಮೌಲ್ಯಗಳು ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮನೆ ಮನೆ ಹನುಮ’ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಮನೆಯಲ್ಲಿ ಹನುಮನ ಪೂಜೆ ಮಾಡಿಸಲು ಆಸಕ್ತರು ವಿಶ್ವ ಹಿಂದೂ ಪರಿಷತ್ ಅನ್ನು ಸಂಪರ್ಕಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ಅಥವಾ ಕಾಣಿಕೆ ಇರುವುದಿಲ್ಲ. ಪೂರ್ವ ನೋಂದಣಿಗಾಗಿ 8105366574 ಅಥವಾ 9880309898 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಬಾಲ ಪ್ರತಿಭೆ ಹಾಗೂ ತ್ರಿವಳಿ ವಿಶ್ವದಾಖಲೆ ಸಾಧಕ ಪೃಥು ಪಿ. ಅವರು ವೇದಘೋಷದ ಮೂಲಕ ಶ್ರೀ ಮಾರುತಿ ಗುರೂಜಿಯವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್, ಉದ್ಯಮಿ ಮನು, ವಿಶ್ವ ಹಿಂದೂ ಪರಿಷತ್‌ನ ನರಸಿಂಹ ಮೂರ್ತಿ, ಮಂಜುನಾಥ್, ಹುಲಗಾದ್ರಿ, ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ನಿರ್ದೇಶಕಿ ಸರಸ್ವತಿ ಗಣೇಶ್, ದಿಲೀಪ್, ಮೂಕಾಂಬಿಕಾ ಸತ್ಸಂಗದ ಅಧ್ಯಕ್ಷೆ ಶುಭಾ ಅರುಣ್, ನಂಜನಗೂಡು ಬ್ರಾಹ್ಮಣ ಸಂಘದ ಫಣೀಶ್, ಸುಧಾ ಪ್ರಕಾಶ್, ಶೈಲಾ, ಪೂಜಾ ಪುನೀತ್, ಹೇಮಾ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








