ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 47 (ಎಲೆಕೇರಿ ಗೇಟ್) ರ ಬದಲಿಗೆ ನಿರ್ಮಿಸಲಾದ ರಸ್ತೆ ಮೇಲ್ಸೇತುವೆಯನ್ನು ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಲೋಕಾರ್ಪಣೆ ಮಾಡಿದರು
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಇಂದು ಚನ್ನಪಟ್ಟಣದ ಎಲೆಕೇರಿ ಗೇಟ್ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 47 ರ ಬದಲಿಗೆ ಹೊಸದಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಮತ್ತು ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಚಿವ ವಿ. ಸೋಮಣ್ಣ ಮಾತನಾಡಿ, ಈ ಹೊಸ ಮೇಲ್ಸೇತುವೆಯಿಂದ ಸಮಯ ಉಳಿಯುವುದು ಮಾತ್ರವಲ್ಲದೆ, ಸಂಚಾರ ದಟ್ಟಣೆಯು ಕಡಿಮೆ ಯಾಗುತ್ತದೆ. ಇದರಿಂದ ರಸ್ತೆ ಸಂಚಾರ ಮತ್ತು ಮತ್ತು ರೈಲು ಕಾರ್ಯಾಚರಣೆಗೆ ಅನುಕೂಲವಾಗಲಿದೆ. ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕರಿಗೆ ಸುಗಮ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸಲು ಮೈಸೂರು-ಬೆಂಗಳೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಭಾರತೀಯ ರೈಲ್ವೆ ದೇಶದ ಬೆಳವಣಿಗೆಯ ಎಂಜಿನ್ ಆಗಿದೆ, ಮೂಲಸೌಕರ್ಯ ಅಭಿವೃದ್ಧಿಯು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಚಿವರು ಹೇಳಿದರು. ಯಲಹಂಕದಲ್ಲಿ ಪ್ರಸ್ತಾವಿತ ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ , ರೈಲು ಮಾರ್ಗಗಳನ್ನು ಚತುಷ್ಪಥಗೊಳಿತ್ತಿರುವ ಕಾರ್ಯ ಮತ್ತು ರೈಲುಗಳ ವೇಗವನ್ನು ಹೆಚ್ಚಿಸುವಂತಹ ಯೋಜನೆಗಳು ಪ್ರಯಾಣ ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.
Also read: ಮಿಡ್‌ಟೌನ್ ಕಾರ್ಯ ಇಡೀ ರೋಟರಿ ವಲಯಕ್ಕೆ ಮಾದರಿ: ಪ್ರಕಾಶ್ ಕಾರಂತ್
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಒಂಬತ್ತು ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿವೆ, ಈ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ, ಅಗತ್ಯವಿರುವ ಹೆಚ್ಚಿನ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಶ್ರೀ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದರು. ಬೆಂಗಳೂರು ಮತ್ತು ಪುಣೆ ನಡುವೆ ಹೈಸ್ಪೀಡ್ ರೈಲು ಯೋಜನೆ ಜಾರಿಗೆ ತರುವಂತೆ ಸಚಿವರನ್ನು ಒತ್ತಾಯಿಸಿದರು.
ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ಹೊಸ ಅಭಿವೃದ್ಧಿ ಕಾರ್ಯಗಳ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿರುವ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದರು. ಚನ್ನಪಟ್ಟಣ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವಿನ ಮೆಮು ರೈಲು ಸೇವೆಗಳನ್ನು ಹಾಗೂ ಚನ್ನಪಟ್ಟಣದ ಎಲೆಕೇರಿ ಗೇಟ್‌ನಲ್ಲಿರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 47 ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಅವರು ಶ್ಲಾಘಿಸಿದರು.
ಸುಮಾರು ₹22.40 ಕೋಟಿ ವೆಚ್ಚದಲ್ಲಿ ಈ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯು ಚನ್ನಪಟ್ಟಣ ಜೆಸಿ ರಸ್ತೆಯನ್ನು ಆಂಜನೇಯ ದೇವಸ್ಥಾನ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. ಈ ರಸ್ತೆ ಮೇಲ್ಸೇತುವೆಯ ನಿರ್ಮಾಣದಿಂದ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಿದ್ದು, ಸಂಚಾರ ದಟ್ಟಣೆ ಕಡಿಮೆಯಾಗಿದೆ ಮತ್ತು ರೈಲು ಹಾಗೂ ರಸ್ತೆ ಸಂಚಾರದ ಸುರಕ್ಷತೆಯು ಮತ್ತಷ್ಟು ಹೆಚ್ಚಾಗಿದೆ.
ಇದಕ್ಕೂ ಮುನ್ನ, ರೈಲ್ವೆ ರಾಜ್ಯ ಸಚಿವರು ಲೆವೆಲ್ ಕ್ರಾಸಿಂಗ್ ಸಂಖ್ಯೆ 16 ರ ಬದಲಿಗೆ (ರಾಮೋಹಳ್ಳಿ ಗೇಟ್‌ನಲ್ಲಿ) ನಡೆಯುತ್ತಿರುವ ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು ಮತ್ತು ಕೆಲಸವನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಭಯ್ ಕುಮಾರ್ ಗುಪ್ತಾ, ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








