ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟ್ರಾಫಿಕ್ ಪೊಲೀಸರನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ನಗರದ ಟಿ. ಸೀನಪ್ಪಶೆಟ್ಟಿ ವೃತ್ತದಲ್ಲಿ ಸೋಮವಾರ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಸವಾರ ತನ್ನ ಹಿಂಬದಿ ಸವಾರನೊಂದಿಗೆ ರೀಲ್ಸ್ ಚಿತ್ರೀಕರಿಸಿದ್ದಾನೆ. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡಿರುವುದಲ್ಲದೆ, ಮಹಿಳಾ ದ್ವಿಚಕ್ರ ವಾಹನ ಸವಾರರ ಬಗ್ಗೆ ಅವಹೇಳನಕಾರಿ ರೀತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಘಟನೆಯ ನಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಾಹನವನ್ನು ಸೀಜ್ ಮಾಡಿದ್ದಾರೆ. ಜೊತೆಗೆ ಅವರಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಿಸುವ ವಿಡಿಯೋವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನೂ, ಬೈಕ್ ಸವಾರನ ವಿರುದ್ಧ ಭಾರತೀಯ ಮೋಟಾರು ವಾಹನಗಳ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









