ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಮಹಾರಾಜ ಟ್ರೋಫಿ KSCA ಟಿ20–2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡವು ರೋಚಕ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ ತಂಡವು 4 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಶಿವಮೊಗ್ಗ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಸೇರ್ಪಡೆಯಾಗಿದೆ.
ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿರ್ದೇಶಕರಾದ ಡಿ.ಎಸ್. ಅರುಣ್ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಶಿವಮೊಗ್ಗ ಯೋಧಾಸ್ ತಂಡದ ಈ ಸಾಧನೆ ಜಿಲ್ಲೆಯ ಪ್ರತಿಯೊಬ್ಬ ಕ್ರೀಡಾಭಿಮಾನಿಗೂ ಹೆಮ್ಮೆಯ ವಿಷಯ. ಆಟಗಾರರ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಮತ್ತು ತಂಡದ ಸಮರ್ಪಣೆ ಈ ಗೆಲುವಿನ ಮೂಲ ಕಾರಣಗಳು. ಮಹಾರಾಜ ಟ್ರೋಫಿಯಂತಹ ಟೂರ್ನಿಗಳು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಇಲ್ಲಿಂದ ಹೊರಹೊಮ್ಮುವ ಆಟಗಾರರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೀರ್ತಿಯನ್ನು ಹೆಚ್ಚಿಸಲಿ,” ಎಂದು ಶುಭ ಹಾರೈಸಿದರು.
Also read: Bangkok | ಪಬ್‌ನಲ್ಲಿ ಭೀಕರ ಅಗ್ನಿ ಅವಘಡ—27 ಸಾವು, ಹಲವರಿಗೆ ಗಾಯ
ತಂಡದ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ಫ್ರಾಂಚೈಸಿ ಆಡಳಿತ ಮಂಡಳಿ ಹಾಗೂ ಶಿವಮೊಗ್ಗ KSCA ಘಟಕದ ಎಲ್ಲಾ ಪದಾಧಿಕಾರಿಗಳ ಶ್ರಮವನ್ನು ಅವರು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ KSCA ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









