ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ವಿ.ಎಂ.ಎಸ್. ಗೋಪಿ ಬೆಂಗಳೂರು |
ದೇಶದಾದ್ಯಂತ ವ್ಯಾಸ ಪೂರ್ಣಿಮಾ (Vyas Purnima) ಮತ್ತು ಗುರು ಪೂರ್ಣಿಮಾವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಮಹರ್ಷಿ ವೇದವ್ಯಾಸರ ಜನ್ಮ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸುವುದು ಭಾರತೀಯ ಸಂಪ್ರದಾಯದ ಪ್ರಮುಖ ಅಂಶವಾಗಿದೆ. ಆಷಾಢ ಮಾಸದ ಹುಣ್ಣಿಮೆ ದಿನವೇ ಈ ಪವಿತ್ರ ದಿನವಾಗಿದ್ದು, ಗುರುಗಳ ಮಹತ್ವವನ್ನು ಸ್ಮರಿಸುವ ದಿನವಾಗಿದೆ.
ಗುರು ಸ್ತೋತ್ರ:
ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಈ ಪವಿತ್ರ ಶ್ಲೋಕವೇ ಗುರುಗಳ ಮಹತ್ವವನ್ನು ಸಂಪೂರ್ಣವಾಗಿ ವಿವರಿಸುತ್ತದೆ. ಜೀವನದಲ್ಲಿ ನಮಗೆ ದಾರಿ ತೋರಿಸುವ ಪ್ರತಿಯೊಬ್ಬರೂ ಗುರುಗಳೇ ಎಂಬ ಸಂದೇಶವನ್ನು ಇದು ಸಾರುತ್ತದೆ.
ಪ್ರತಿಯೊಬ್ಬರ ಜೀವನದಲ್ಲಿಯೂ ತಾಯಿ-ತಂದೆಯೇ ಮೊದಲ ಗುರುಗಳು. ಮನೆ ಎನ್ನುವುದು ಮೊದಲ ಪಾಠಶಾಲೆಯಾಗಿದ್ದು, ತಾಯಿ ಮೊದಲ ಶಿಕ್ಷಕಿ. ಮಕ್ಕಳಿಗೆ ಮೌಲ್ಯಗಳು, ಸಂಸ್ಕಾರಗಳು ಮತ್ತು ಜೀವನ ಪಾಠಗಳನ್ನು ಕಲಿಸುವಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
Vyas Purnima | ನಾಗರಿಕರನ್ನು ರೂಪಿಸುವ ಸೃಷ್ಟಿಕರ್ತರು
ಗುರುವಿನ ಸ್ಥಾನವು ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತವಾಗಿದೆ. ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವ ಸೃಷ್ಟಿಕರ್ತರೇ ಗುರುಗಳು. ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಸಾಧನೆ ಮಾಡುವ ಕನಸು ಇರುತ್ತದೆ. ಗುರಿ ಎಷ್ಟು ಮುಖ್ಯವೋ, ಅದನ್ನು ಸಾಧಿಸಲು ಮಾರ್ಗದರ್ಶನ ನೀಡುವ ಗುರುಗಳು ಅಷ್ಟೇ ಮುಖ್ಯ.
Also Read>> Guru Purnima | ಅಜ್ಞಾನವನ್ನು ದೂರ ಮಾಡುವ ಜ್ಞಾನದ ಹಬ್ಬ
“ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು” ಎಂಬ ಗಾದೆ ಮಾತು ಜೀವನದ ಸತ್ಯವನ್ನು ಹೇಳುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಗುರುಗಳ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಅಗತ್ಯ. ಗುರುಗಳ ಸಹಾಯದಿಂದಲೇ ಜೀವನದಲ್ಲಿ ಯಶಸ್ಸು ಸಾಧ್ಯ.
ಗುರು ಎಂದರೆ ಕೇವಲ ಶಾಲಾ ಶಿಕ್ಷಕರಷ್ಟೇ ಅಲ್ಲ; ಜೀವನದಲ್ಲಿ ಸರಿಯಾದ ದಾರಿಯನ್ನು ತೋರಿಸುವ ಪ್ರತಿಯೊಬ್ಬರೂ ಗುರುಗಳೇ. ಅಂತಹ ಎಲ್ಲಾ ಗುರುವೃಂದಕ್ಕೂ ಹೃತ್ಪೂರ್ವಕ ಗುರು ಪೂರ್ಣಿಮೆಯ ಶುಭಾಶಯಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











