ಕಲ್ಪ ಮೀಡಿಯಾ ಹೌಸ್ | ಸಾಗರ |
ಕಡಿಮೆ ಬೆಲೆಗೆ ಬಂಗಾರದ (Gold) ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹9.60 ಲಕ್ಷ ನಗದು ಪಡೆದು, ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ₹7.10 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ನಿವಾಸಿ ಮಂಜು ವಾಸ ವಿಜಯನಗರ ಎಂಬಾತ ತನ್ನ ಬಳಿ ಬಂಗಾರದ ನಾಣ್ಯಗಳಿದ್ದು, ಅವುಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ ಜಗದೀಶ್ ಎಂಬುವವರನ್ನು ನಂಬಿಸಿದ್ದಾನೆ ಎನ್ನಲಾಗಿದೆ. ಬಳಿಕ 2026ರ ಜೂನ್ 4ರಂದು ಬೆಳಿಗ್ಗೆ ಸಾಗರ ತಾಲ್ಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಜಗದೀಶ್ ಅವರನ್ನು ಕರೆಸಿಕೊಂಡು, ಅವರಿಂದ ₹9,60,000 ನಗದು ಹಣವನ್ನು ಪಡೆದುಕೊಂಡು, ಬದಲಾಗಿ ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2026ರಂತೆ ಬಿಎನ್‌ಎಸ್ ಕಾಯ್ದೆಯ ಕಲಂ 318(4), 190ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
Gold Scam : ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ
ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್.ಬಿ, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾರಿಯಪ್ಪ ವಿ.ಜಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಸಾಗರ ಉಪವಿಭಾಗದ ಎಎಸ್‌ಪಿ ಶ್ರೀ ಬೆನಕ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
Also read>> ಪಾಟ್ನಾದಲ್ಲಿ ಟಾಟಾ ಮೋಟಾರ್ಸ್ Re.Wi.Re – ಸುಧಾರಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಕ್ಕೆ ಚಾಲನೆ
ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಪ್ರವೀಣ್ ಎಸ್.ಪಿ. ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿತ್ತು.
ಆಗಸ್ಟ್ 4ರಂದು ಆರೋಪಿಯ ಬಂಧನ
ಪೊಲೀಸ್ ತಂಡದ ನಿರಂತರ ಕಾರ್ಯಾಚರಣೆಯ ಫಲವಾಗಿ 2026ರ ಆಗಸ್ಟ್ 4ರಂದು ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಮಂಜುನಾಥ ವಿ., 30 ವರ್ಷ, ಪೈಂಟಿಂಗ್ ಕೆಲಸ, ಯಲ್ಲಾಪುರ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ₹7,10,000 ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ವಂಚನೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








