ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ಸತೀಶ್ ಶೆಟ್ಟಿ ಚೆರ್ಕಾಡಿ ದೊಡ್ಡಮನೆ |
ಮಗುವಿನ ಮೊದಲ ಅಳು ಕೇಳಿಸಿದಾಗ, ಆ ಮಗುವಿಗೆ ಜನ್ಮ ನೀಡಿದ ತಾಯಿಯ ಕಣ್ಣಿನ ಹನಿಯಲ್ಲಿದ್ದದ್ದು ಅಪಾರ ಸಂತೋಷ. ತನ್ನ ನಿದ್ರೆ, ಹಸಿವು, ಕನಸುಗಳನ್ನೆಲ್ಲ ಬಲಿಕೊಟ್ಟು, ಮಗುವಿನ ಪ್ರತಿಯೊಂದು ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ಹೆತ್ತವರು, (Parents) ಆ ಮಗು ಸರಿ ದಾರಿಯಲ್ಲಿ ನಡೆಯಲಿ ಎಂದು ಒಂದೆರಡು ಏಟು ಕೊಟ್ಟರೆ ಅದು ಅಪರಾಧವೇ?
ಇಂದು ಪಾಶ್ಚಿಮಾತ್ಯ ದೇಶಗಳ ಮಾದರಿಯನ್ನು ನೋಡಿ, ಭಾರತದಲ್ಲೂ ಮಕ್ಕಳಿಗೆ ತಂದೆ-ತಾಯಿ ಶಿಸ್ತು ಕಲಿಸಲು ಹೊಡೆದರೆ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?
Also Read>> ಪ್ರವಾಸಿಗರಿಗೆ ಸಿಹಿಸುದ್ದಿ: ಸದ್ಯದಲ್ಲೇ ಸಕ್ರೆಬೈಲು ಆನೆ ಬಿಡಾರ ಪುನರಾರಂಭ
Parents : ಲಾಲನೆ-ಪಾಲನೆ ಹೆತ್ತವರದ್ದು, ಮಧ್ಯೆ ಸರ್ಕಾರದ ಹಸ್ತಕ್ಷೇಪವೇಕೆ?
ಮಗುವಿಗೆ ಸಣ್ಣ ಜ್ವರ ಬಂದರೂ ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಾರೈಕೆ ಮಾಡುವುದು ತಂದೆ-ತಾಯಿ ಹೊರತು ಈ ಸಮಾಜವಲ್ಲ, ಸರ್ಕಾರವೂ ಅಲ್ಲ.
ತಪ್ಪು ಮಾಡಿದಾಗ ತಿದ್ದುವ ಹಕ್ಕು
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಮಗು ತಪ್ಪುದಾರಿಗೆ ತುಳಿಯುವಾಗ, ದುರಭ್ಯಾಸಗಳಿಗೆ ಒಳಗಾಗುವಾಗ ಅದನ್ನು ತಡೆದು, ಒಂದಿಷ್ಟು ಗದರಿ, ಗಿಡವನ್ನು ಕಡಿದು ಆಕಾರ ಕೊಡುವಂತೆ ಶಿಸ್ತು ಕಲಿಸುವ ಹಕ್ಕು ಹೆತ್ತವರಿಗಿಲ್ಲವೇ?
ನಾಳೆ ಸಮಾಜ ಬೆರಳು ಮಾಡುವುದು ಯಾರತ್ತ?
ಅದೇ ಮಗು ನಾಳೆ ಬೆಳೆದು ದೊಡ್ಡವನಾಗಿ ಸಮಾಜಕ್ಕೆ ಕಂಟಕವಾದರೆ, ನಾಡಿನ ಜನರು ಬೆರಳು ಮಾಡಿ ತೋರಿಸುವುದು ಆ ಮಗುವನ್ನು ಬೆಳೆಸಿದ ಹೆತ್ತವರನ್ನೇ! “ಅಪ್ಪ-ಅಮ್ಮ ಸರಿಯಾಗಿ ಶಿಸ್ತು ಕಲಿಸಿಲ್ಲ” ಎಂದು ಇಡೀ ಸಮಾಜ ದೂರುವಾಗ, ಇಂದು ತಿದ್ದುವ ಸಮಯದಲ್ಲಿ ಮೂಗು ತೂರಿಸುವುದು ಎಷ್ಟು ನ್ಯಾಯ?
ಕೇವಲ ಪ್ರೀತಿಯೊಂದೇ ಮಗುವಿನ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ; ಪ್ರೀತಿಯ ಜೊತೆಗೆ ಸಣ್ಣ ಭಯ ಮತ್ತು ಶಿಸ್ತು ಇರಲೇಬೇಕು. ಹೆತ್ತವರ ಕೈ ಮಗುವಿನ ಮೇಲೆ ಎದ್ದದ್ದು ಕೋಪದಿಂದಲ್ಲ, ಆ ಮಗುವಿನ ಭವಿಷ್ಯ ಹಾಳಾಗಬಾರದೆಂಬ ಕಳಕಳಿಯಿಂದ!
ನಿಜವಾದ ಅಪರಾಧಿಗಳು ಯಾರು? ವೃದ್ಧಾಶ್ರಮಕ್ಕೆ ತಳ್ಳುವ ಮಕ್ಕಳಿಗೆ ಇರಲಿ ಕಠಿಣ ಶಿಕ್ಷೆ!
ಇಂದು ಕಾನೂನು ತರಬೇಕಿರುವುದು ಮಕ್ಕಳಿಗೆ ಶಿಸ್ತು ಕಲಿಸುವ ಹೆತ್ತವರ ಮೇಲಲ್ಲ; ಬದಲಾಗಿ ತಮ್ಮನ್ನು ಹೆತ್ತು, ಸಾಕಿ, ಸಲಹಿ, ತಮ್ಮ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದ ತಂದೆ-ತಾಯಿಯನ್ನು ವೃದ್ಧಾಶ್ರಮದ ಕತ್ತಲ ಕೊಠಡಿಗೆ ತಳ್ಳುವ ಕಲ್ಲೆದೆಯ ಮಕ್ಕಳ ಮೇಲೆ!
ಯಾವ ಕಣ್ಣುಗಳು ನಮಗಾಗಿ ಜಾಗರಣೆ ಕಳೆದ್ವೋ, ಯಾವ ಕೈಗಳು ನಮಗಾಗಿ ರಕ್ತವನ್ನು ಬೆವರಾಗಿಸಿ ದುಡಿದ್ವೋ, ಅದೇ ಕಣ್ಣುಗಳಲ್ಲಿ ವೃದ್ಧಾಪ್ಯದಲ್ಲಿ ನೀರು ತರಿಸುವುದಕ್ಕಿಂತ ದೊಡ್ಡ ಪಾತಕ ಇನ್ನೊಂದಿಲ್ಲ.
ತಮ್ಮ ಸ್ವಾರ್ಥಕ್ಕಾಗಿ, ಹೆಂಡತಿ-ಮಕ್ಕಳ ಆಸೆಗಾಗಿ ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಹೆತ್ತವರನ್ನು ರಸ್ತೆಗೆ ತಳ್ಳುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿಗೆ ಜೀವಾವಧಿ ಶಿಕ್ಷೆ ಅಥವಾ ಕಠಿಣ ದಂಡನೆ ವಿಧಿಸುವ ಕಾನೂನು ಬರಬೇಕು.
ತಂದೆ-ತಾಯಿಯ ಅಶ್ರುಬಿಂದುವಿನಲ್ಲಿ ಅಪಾರವಾದ ಶಾಪವಿದೆ. ಯಾವ ಮಗ ಅಥವಾ ಮಗಳು ಹೆತ್ತವರ ಕಣ್ಣಿನಲ್ಲಿ ನೀರು ತರಿಸುತ್ತಾರೋ, ಅವರು ಈ ಜನ್ಮದಲ್ಲಿ ಮಾತ್ರವಲ್ಲ, ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಹೆತ್ತವರ ಪ್ರೀತಿ ಮತ್ತು ಶಿಸ್ತನ್ನು ಅರ್ಥಮಾಡಿಕೊಳ್ಳದ ಸಮಾಜಕ್ಕೆ ಭವಿಷ್ಯವಿಲ್ಲ. ಸರ್ಕಾರಗಳು ಕಾನೂನು ಮಾಡುವಾಗ ಹೆತ್ತವರ ಕಣ್ಣೀರು ಮತ್ತು ಅವರ ತ್ಯಾಗದ ಆಳವನ್ನು ಅರಿಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








