ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ರೈಲ್ವೆಯ (SWR) ಮಹಾಪ್ರಬಂಧಕರಾದ ಪಿ. ಅನಂತ್ ಅವರು ಆ.5ರಂದು ಮೈಸೂರು (Mysuru) ರೈಲ್ವೆ ವಿಭಾಗದ ವಿವಿಧ ಘಟಕಗಳು, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ರೈಲ್ವೆ ವಿಭಾಗದ ಕಾರ್ಯನಿರ್ವಹಣೆ, ಪ್ರಯಾಣಿಕರ ಸೇವೆಗಳು, ಆರೋಗ್ಯ ಸೌಲಭ್ಯಗಳು ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿಯನ್ನು ಮಹಾಪ್ರಬಂಧಕರು ಅವಲೋಕಿಸಿದರು.
SWR : ಮೈಸೂರು ರೈಲ್ವೆ ಆಸ್ಪತ್ರೆಗೆ ಭೇಟಿ
ಮಹಾಪ್ರಬಂಧಕರು ಮೈಸೂರು ರೈಲ್ವೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿರುವ ಆರೋಗ್ಯ ಸೇವೆಗಳ ಗುಣಮಟ್ಟ ಹಾಗೂ ರೋಗಿಗಳ ಆರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳೊಂದಿಗೆ ಸಂವಾದ ನಡೆಸಿದ ಅವರು, ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಉಪಕರಣಗಳು, ಆರೋಗ್ಯ ಸೌಲಭ್ಯಗಳು ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು.
ರೈಲ್ವೆ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉತ್ತಮ ಗುಣಮಟ್ಟದ, ಸಮಯೋಚಿತ ಹಾಗೂ ರೋಗಿ-ಕೇಂದ್ರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಆಸ್ಪತ್ರೆಯನ್ನು ಆಧುನಿಕ ವೈದ್ಯಕೀಯ ಸೌಲಭ್ಯಗಳಿಂದ ಮತ್ತಷ್ಟು ಸಜ್ಜುಗೊಳಿಸುವ ಮಹತ್ವವನ್ನೂ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮೈಸೂರು–ಚಾಮರಾಜನಗರ ವಿಭಾಗದಲ್ಲಿ ವಿಂಡೋ ಟ್ರೈಲಿಂಗ್
ಇದಾದ ಬಳಿಕ ಮಹಾಪ್ರಬಂಧಕರು ಮೈಸೂರು–ಚಾಮರಾಜನಗರ ವಿಭಾಗದಲ್ಲಿ ವಿಂಡೋ ಟ್ರೈಲಿಂಗ್ ಪರಿಶೀಲನೆ ನಡೆಸಿದರು. ರೈಲಿನಲ್ಲಿ ಸಂಚರಿಸುತ್ತಲೇ ರೈಲು ಮಾರ್ಗ, ನಿಲ್ದಾಣಗಳು, ಹಳಿಗಳು ಹಾಗೂ ವಿವಿಧ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
Also Read>> ಹೆತ್ತವರ ಕಣ್ಣೀರು ಮತ್ತು ಮೌನದ ಆರ್ತನಾದ: ಶಿಸ್ತಿನ ಕೈಗಳಿಗೆ ಕಾನೂನಿನ ಬೇಡಿ ಏಕೆ?
ನಂಜನಗೂಡಿನಲ್ಲಿ ಸ್ಟೇಷನ್ ಮಾಸ್ಟರ್ ಪ್ಯಾನೆಲ್, ನಿಲ್ದಾಣದ ಆವರಣ ಹಾಗೂ ರೈಲು ಹಳಿಗಳ ಪಾಯಿಂಟ್‌ಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ವ್ಯವಸ್ಥೆಗಳ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು.
ಚಾಮರಾಜನಗರದಲ್ಲಿ ಅಮೃತ ಭಾರತ್ ಸ್ಟೇಷನ್ ಕಾಮಗಾರಿ ಪರಿಶೀಲನೆ
ಚಾಮರಾಜನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಮಹಾಪ್ರಬಂಧಕರು ಅಮೃತ ಭಾರತ್ ಸ್ಟೇಷನ್ ಯೋಜನೆ (ABSS) ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ವಿವಿಧ ಹಂತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದಂತೆ ಹಾಗೂ ರೈಲ್ವೆ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಸ್ಟೇಷನ್ ಮಾಸ್ಟರ್ ಪ್ಯಾನೆಲ್ ಬೋರ್ಡ್ ಹಾಗೂ ನಂಜನಗೂಡು–ಚಾಮರಾಜನಗರ ವಿಭಾಗದಲ್ಲಿರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 35ರನ್ನೂ ಮಹಾಪ್ರಬಂಧಕರು ಪರಿಶೀಲಿಸಿದರು.
ರೈಲು ಕಾರ್ಯಾಚರಣೆಯ ಸುರಕ್ಷತೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಭಾಗೀಯ ಕಚೇರಿಯಲ್ಲಿ ವಿಮರ್ಶಾ ಸಭೆ
ಪರಿಶೀಲನೆಯ ಬಳಿಕ ಮೈಸೂರು ವಿಭಾಗೀಯ ಕಚೇರಿಯಲ್ಲಿ ಮಹಾಪ್ರಬಂಧಕರು ವಿಮರ್ಶಾ ಸಭೆ ನಡೆಸಿದರು. ಸಭೆಯಲ್ಲಿ ಮೈಸೂರು ವಿಭಾಗದ ಕಾರ್ಯಕ್ಷಮತೆ, ರೈಲ್ವೆ ಕಾರ್ಯಾಚರಣೆ ಹಾಗೂ ವಿವಿಧ ಪ್ರಮುಖ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.
ವಿಭಾಗದ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವುದು, ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳನ್ನು ಸುಧಾರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಮುಖ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಕಾಮಗಾರಿಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮಹಾಪ್ರಬಂಧಕರು ಸೂಚಿಸಿದರು.
ಮಹಾಪ್ರಬಂಧಕರ ಪರಿಶೀಲನೆ ಹಾಗೂ ವಿಮರ್ಶಾ ಸಭೆಯಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಶಮ್ಮಾಸ್ ಹಮೀದ್, ಸಿಪಿಎಂ/ಗತಿಶಕ್ತಿ ಶ್ರೀ ಆನಂದ ಭಾರತಿ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಅಶೋಕ್ ಕುಮಾರ್ ಸೇರಿದಂತೆ ಮೈಸೂರು ವಿಭಾಗದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು ವಿಭಾಗದ ವಿವಿಧ ಘಟಕಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯ ಮೂಲಕ ರೈಲ್ವೆ ಕಾರ್ಯಾಚರಣೆ, ಪ್ರಯಾಣಿಕರ ಸೇವೆ, ಸುರಕ್ಷತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಮಹಾಪ್ರಬಂಧಕರ ಭೇಟಿ ಮಹತ್ವ ಪಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







