ಕಲ್ಪ ಮೀಡಿಯಾ ಹೌಸ್ | ಹೊಸನಗರ | (ವರದಿ: ಮಧುರಾಮ್) |
ಪಶ್ಚಿಮಘಟ್ಟಗಳ (Western Ghat) ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ನಿರಂತರವಾಗಿ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾರಾಹಿ ಪಂಪ್ ಸ್ಟೋರೇಜ್ (Varahi Pumped Storage Project) ಮೆಗಾ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ವೃಕ್ಷಲಕ್ಷ ಆಂದೋಲನ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪಶ್ಚಿಮಘಟ್ಟದ ಅರಣ್ಯ, ಜಲಮೂಲಗಳು, ವನ್ಯಜೀವಿಗಳು ಹಾಗೂ ಸ್ಥಳೀಯ ಜನಜೀವನದ ಮೇಲೆ ಯೋಜನೆಯಿಂದ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು, ಸರ್ಕಾರ ಕೂಡಲೇ ಯೋಜನೆಯನ್ನು ಕೈಬಿಟ್ಟು ಪರ್ಯಾಯ ವಿಕೇಂದ್ರೀಕೃತ ಇಂಧನ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಆಂದೋಲನ ಆಗ್ರಹಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿರುವ ಸಂದರ್ಭದಲ್ಲೇ ವಾರಾಹಿ ಪಂಪ್ ಸ್ಟೋರೇಜ್ ಯೋಜನೆಯ ಸರ್ವೆಗೆ ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವೃಕ್ಷಲಕ್ಷ ಆಂದೋಲನ ಹೇಳಿದೆ.
ಸೂಕ್ಷ್ಮ ಪರಿಸರ ಪ್ರದೇಶದಲ್ಲೇ ಬೃಹತ್ ಯೋಜನೆ?
ವೃಕ್ಷಲಕ್ಷ ಆಂದೋಲನದ ಪ್ರಕಾರ, ಕರ್ನಾಟಕ ಪವರ್ ಕಾರ್ಪೋರೇಶನ್ (ಕೆಪಿಸಿ) ಪ್ರಸ್ತಾಪಿಸಿರುವ ವಾರಾಹಿ ಪಂಪ್ ಸ್ಟೋರೇಜ್ ಯೋಜನೆಯು ಮೂಕಾಂಬಿಕಾ ಮತ್ತು ಸೋಮೇಶ್ವರ ಅಭಯಾರಣ್ಯಗಳ ವ್ಯಾಪ್ತಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಬರಲಿದೆ. ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಸಹಯೋಗವೂ ಇರಲಿದೆ ಎಂದು ಆಂದೋಲನ ತಿಳಿಸಿದೆ.
ಮಾಣಿ ಮತ್ತು ಹುಲಿಕಲ್ ಅಣೆಕಟ್ಟುಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದು, ಹೊಸ ಜಲಾಶಯ ನಿರ್ಮಿಸುವುದು ಹಾಗೂ ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿವೆ ಎಂದು ಹೇಳಲಾಗಿದೆ.
ಈ ಯೋಜನೆಯ ವ್ಯಾಪ್ತಿ ಕುಂದಾಪುರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರಲಿದೆ. ಬಾಳೆಬರೆ ಘಟ್ಟ, ಹೊಸಗುಂಡಿ, ಮಾಸ್ತಿಕಟ್ಟೆ, ಯಡೂರು, ಹುಲಿಕಲ್, ಸಿದ್ದಾಪುರ ಹಾಗೂ ಶಂಕರನಾರಾಯಣ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸೂಕ್ಷ್ಮ ಪರಿಸರ ಸ್ಥಿತಿಯನ್ನು ಎದುರಿಸುತ್ತಿವೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
Also Read>> AI ಯುಗದಲ್ಲಿ ಗುಣಮಟ್ಟದ ಶಿಕ್ಷಣ :ಅ.16-17ರಂದು ಕುಮದ್ವತಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ವಾರಾಹಿ ಕಣಿವೆಗೆ ಮತ್ತೊಂದು ಬೃಹತ್ ಯೋಜನೆ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ
ವಾರಾಹಿ ಕಣಿವೆಯಲ್ಲಿ ಈಗಾಗಲೇ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದ ಪರಿಸರದ ಮೇಲೆ ಸಾಕಷ್ಟು ಒತ್ತಡ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬೃಹತ್ ಜಲಾಶಯ ಮತ್ತು ಪಂಪ್ ಸ್ಟೋರೇಜ್ ಯೋಜನೆಯನ್ನು ಕೈಗೊಳ್ಳುವುದು ಪರಿಸರದ ಧಾರಣಾ ಸಾಮರ್ಥ್ಯವನ್ನು ಮೀರಬಹುದು ಎಂದು ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ ಎಂದು ಆಂದೋಲನ ತಿಳಿಸಿದೆ.
ವಾರಾಹಿ ಪ್ರದೇಶದಲ್ಲಿ ಈಗಾಗಲೇ ಅರಣ್ಯ ನಾಶ ಮತ್ತು ಪರಿಸರ ಹಾನಿ ಗಂಭೀರ ಮಟ್ಟಕ್ಕೆ ತಲುಪಿದೆ. ಪಂಪ್ ಸ್ಟೋರೇಜ್ ಯೋಜನೆಯ ಹೆಸರಿನಲ್ಲಿ ಪಶ್ಚಿಮಘಟ್ಟದ ಭೂಪ್ರದೇಶವನ್ನು ಮತ್ತಷ್ಟು ಅಗೆದು, ಅರಣ್ಯ ಪ್ರದೇಶಕ್ಕೆ ಹಾನಿ ಮಾಡುವ ಪ್ರಯತ್ನ ನಡೆಯಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಎಚ್ಚರಿಸಿದ್ದಾರೆ.
ಭೂಕುಸಿತದ ಅಪಾಯದ ಬಗ್ಗೆಯೂ ಎಚ್ಚರಿಕೆ
ಪಶ್ಚಿಮಘಟ್ಟದ ಈ ಭಾಗದಲ್ಲಿ ಭೂಕುಸಿತದ ಅಪಾಯವೂ ಪ್ರಮುಖ ಆತಂಕವಾಗಿದೆ. ಈಗಾಗಲೇ ಸಂಭವಿಸಿರುವ ಭೂಕುಸಿತಗಳ ಅಧ್ಯಯನ ವರದಿಗಳು ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಭೂಕುಸಿತಗಳು ಸಂಭವಿಸುವ ಸಾಧ್ಯತೆಯನ್ನು ಹಾಗೂ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ಸುರಕ್ಷತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸಿವೆ ಎಂದು ಪರಿಸರ ವಿಜ್ಞಾನಿ ಡಾ. ಕೇಶವ ಎಚ್. ಕೊರ್ಸೆ ಆಡಳಿತದ ಗಮನ ಸೆಳೆದಿದ್ದಾರೆ ಎಂದು ವೃಕ್ಷಲಕ್ಷ ತಿಳಿಸಿದೆ.
ಪಶ್ಚಿಮಘಟ್ಟದ ಭೌಗೋಳಿಕ ಸ್ಥಿತಿ, ಭೂಕುಸಿತದ ಸಾಧ್ಯತೆ, ಅರಣ್ಯ ಪ್ರದೇಶದ ಸೂಕ್ಷ್ಮತೆ ಹಾಗೂ ಸ್ಥಳೀಯ ಜನಜೀವನದ ಮೇಲೆ ಬೀರುವ ಪರಿಣಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಅಪಾಯಕಾರಿ ಎಂದು ಪರಿಸರ ಹೋರಾಟಗಾರರು ಎಚ್ಚರಿಸಿದ್ದಾರೆ.
Varahi Pumped Storage Project : ಸಾವಿರಾರು ಎಕರೆ ಅರಣ್ಯ ನಾಶದ ಆತಂಕ
ವಾರಾಹಿ ಪಂಪ್ ಸ್ಟೋರೇಜ್ ಯೋಜನೆಯಿಂದ ಸುಮಾರು ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗುವ, ಸುಮಾರು 2 ಲಕ್ಷ ಮರಗಳು ಹಾಗೂ 4 ಲಕ್ಷ ಚಿಕ್ಕ ಗಿಡಗಳು ನಾಶವಾಗುವ ಸಾಧ್ಯತೆ ಇದೆ ಎಂದು ವೃಕ್ಷಲಕ್ಷ ಆಂದೋಲನ ಆರೋಪಿಸಿದೆ.
ಇಂತಹ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗುವ ಯೋಜನೆಯ ಬದಲು ಪರಿಸರ ಸ್ನೇಹಿ ಹಾಗೂ ವಿಕೇಂದ್ರೀಕೃತ ಸೋಲಾರ್ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕರ್ನಾಟಕ ಪವರ್ ಕಾರ್ಪೋರೇಶನ್‌ಗೆ ಒತ್ತಾಯಿಸಿದ್ದಾರೆ.
ಅಭಿವೃದ್ಧಿಯ ಅಗತ್ಯವನ್ನು ನಿರಾಕರಿಸುವುದಿಲ್ಲವಾದರೂ, ಪರಿಸರದ ಬೆಲೆ ತೆತ್ತು ಅಭಿವೃದ್ಧಿ ಸಾಧಿಸುವ ಮಾದರಿ ಮುಂದುವರಿಯಬಾರದು. ಕಡಿಮೆ ಪರಿಸರ ಹಾನಿಯೊಂದಿಗೆ ವಿದ್ಯುತ್ ಉತ್ಪಾದಿಸುವ ಪರ್ಯಾಯ ಮಾರ್ಗಗಳನ್ನು ಸರ್ಕಾರ ಪರಿಶೀಲಿಸಬೇಕು ಎಂಬುದು ಪರಿಸರ ಹೋರಾಟಗಾರರ ಒತ್ತಾಯವಾಗಿದೆ.
ವನವಾಸಿಗಳು, ರೈತರ ಬದುಕಿನ ಮೇಲೂ ಪರಿಣಾಮದ ಆತಂಕ
ಯೋಜನೆಯಿಂದ ಕೇವಲ ಅರಣ್ಯ ಮತ್ತು ಪರಿಸರ ವ್ಯವಸ್ಥೆಯಷ್ಟೇ ಅಲ್ಲ, ಘಟ್ಟ ಪ್ರದೇಶದಲ್ಲಿ ವಾಸಿಸುವ ವನವಾಸಿಗಳು ಮತ್ತು ರೈತರ ಬದುಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವನವಾಸಿ ಮುಖಂಡ ಶಾಂತಾರಾಂ ಸಿದ್ಧಿ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಘಟ್ಟ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷ ವನವಾಸಿಗಳು ಹಾಗೂ ರೈತರು ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತಷ್ಟು ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ, ವನ್ಯಜೀವಿಗಳ ಹಾವಳಿ ಹೆಚ್ಚಳ ಹಾಗೂ ಭೂಕುಸಿತದಂತಹ ಅಪಾಯಗಳಿಗೆ ಅವರನ್ನು ತಳ್ಳಬಾರದು ಎಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Also Read>> ಸಚಿವರಿಗೆ ಖಾತೆ ಹಂಚಿಕೆ: 13 ಮಂದಿಗೆ ಖಾತೆ, 6 ಸಚಿವರಿಗೆ ಇನ್ನೂ ಜವಾಬ್ದಾರಿ ಇಲ್ಲ
ಸ್ಥಳೀಯ ಜನರ ಬದುಕು, ಅವರ ಭೂಮಿ, ಕೃಷಿ, ಅರಣ್ಯ ಅವಲಂಬನೆ ಹಾಗೂ ಸಾಂಪ್ರದಾಯಿಕ ಜೀವನ ಪದ್ಧತಿಗಳನ್ನು ಪರಿಗಣಿಸದೆ ಬೃಹತ್ ಯೋಜನೆಗಳನ್ನು ಜಾರಿಗೊಳಿಸುವುದು ಸಾಮಾಜಿಕವಾಗಿ ಕೂಡ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೋರಾಟಗಾರರು ಹೇಳಿದ್ದಾರೆ.
ಪರಿಸರ ಹೋರಾಟಗಾರರಿಂದ ತೀವ್ರ ವಿರೋಧ
ವಾರಾಹಿ ಪಂಪ್ ಸ್ಟೋರೇಜ್ ಯೋಜನೆಗೆ ಹಿರಿಯ ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ, ಹಿರಿಯ ಸಾಮಾಜಿಕ ಕಾರ್ಯಕರ್ತ ರವಿಹನಿ, ಸಾಗರ ಗ್ರಾಮಾಂತರ ವಿಜ್ಞಾನ ಕೇಂದ್ರದ ಸಂಚಾಲಕ ಕೆ. ವೆಂಕಟೇಶ್, ಪರ್ಯಾವರಣದ ತುಮರಿ ಅಶೋಕ, ನಗರ ಹೋಬಳಿಯ ಸಾಮಾಜಿಕ ಮುಖಂಡ ನಾರಾಯಣ ಕಾಮತ್, ಪರಿಸರ ಕಾರ್ಯಕರ್ತ ಚಾರ್ವಾಕ ಸುಬ್ರಹ್ಮಣ್ಯ ಹಾಗೂ ವೃಕ್ಷ ಆಂದೋಲನದ ಮುಖಂಡ ಶ್ರೀಪಾದ ಬಿಚ್ಚುಗತ್ತಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಘಟ್ಟದ ಪರಿಸರ ಸಮತೋಲನ ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಘಟ್ಟ ಪ್ರದೇಶದ ಜನರು, ರೈತರು, ವನವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಒಟ್ಟಾಗಿ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ವೃಕ್ಷಲಕ್ಷ ಆಂದೋಲನ ಕರೆ ನೀಡಿದೆ.
ಶರಾವತಿ ಹೋರಾಟದ ಮಾದರಿಯಲ್ಲಿ ವಾರಾಹಿ ರಕ್ಷಣೆಗೆ ಕರೆ
ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ನಡೆದ ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಸುಮಾರು 10 ಸಾವಿರ ಜನರು ಯೋಜನೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಆ ಜನಾಭಿಪ್ರಾಯಕ್ಕೆ ಸೂಕ್ತ ಮಾನ್ಯತೆ ದೊರಕಿಲ್ಲ ಎಂಬುದು ವೃಕ್ಷ ಆಂದೋಲನದ ಆರೋಪವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ವಾರಾಹಿ ಕಣಿವೆಯ ರಕ್ಷಣೆಗೆ ಜನರು ಮತ್ತೊಮ್ಮೆ ಸಂಘಟಿತರಾಗಬೇಕಾಗಿದೆ ಎಂದು ಆಂದೋಲನ ಹೇಳಿದೆ.
“ಪಶ್ಚಿಮಘಟ್ಟದ ಪರಿಸರ ರಕ್ಷಣೆಗೆ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಘಟ್ಟದ ಅರಣ್ಯ ಮತ್ತು ಜಲಮೂಲಗಳನ್ನು ನಾಶ ಮಾಡುವ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಬೇಕು” ಎಂದು ವೃಕ್ಷಲಕ್ಷ ಆಂದೋಲನ ಘಟ್ಟದ ಮಹಾಜನತೆಗೆ ಕರೆ ನೀಡಿದೆ.
“ವಾರಾಹಿ ಕಣಿವೆಯ ರಕ್ಷಣೆಗೆ ಉಡುಪಿಯ ಶ್ರೀಕೃಷ್ಣನೇ ಎದ್ದು ಬರಬೇಕೆ?” ಎಂಬ ಮಾರ್ಮಿಕ ಪ್ರಶ್ನೆಯನ್ನು ಮುಂದಿಟ್ಟಿರುವ ಆಂದೋಲನ, ಸರ್ಕಾರ ಜನರ ಧ್ವನಿಯನ್ನು ಆಲಿಸಿ ಪರಿಸರದ ಹಿತದೃಷ್ಟಿಯಿಂದ ವಾರಾಹಿ ಪಂಪ್ ಸ್ಟೋರೇಜ್ ಯೋಜನೆಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







