ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ವಾತಂತ್ರ್ಯ ಎಂಬುದು ಹಿರಿಯ ದೇಶಭಕ್ತರ ತ್ಯಾಗ, ರಕ್ತ ಹಾಗೂ ಬಲಿದಾನಗಳ ಅಮೂಲ್ಯ ಪ್ರತೀಕವಾಗಿದೆ. ಲಕ್ಷಾಂತರ ವೀರರು ತಮ್ಮ ಪ್ರಾಣವನ್ನೇ ಅರ್ಪಿಸುವ ಮೂಲಕ ನಮಗೆ ಈ ಮುಕ್ತ ವಾತಾವರಣವನ್ನು ತಂದುಕೊಟ್ಟಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಸಂಸ್ಥೆಯ ಕಾರ್ಯದರ್ಶಿ ಬಿ.ವೈ. ರಾಘವೇಂದ್ರ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್ ಸೇರಿದಂತೆ ಅನೇಕ ಮಹಾನ್ ನಾಯಕರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟರು. ಬ್ರಿಟಿಷರ ಕ್ರೂರ ಆಡಳಿತದ ವಿರುದ್ಧ ಹೋರಾಡಿದ ಅಸಂಖ್ಯಾತ ಹೋರಾಟಗಾರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ನಮ್ಮ ಪೂರ್ವಿಕರ ಈ ಅಪಾರ ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಹೇಳಿದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪ
ಭಾರತ ಸ್ವಾತಂತ್ರ್ಯ ಪಡೆದು 2047ರಲ್ಲಿ 100 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಗತಿ ಹಾಗೂ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಯುವಕರು ನಾಳಿನ ಭಾರತದ ಪ್ರಗತಿಯ ಹರಿಕಾರರಾಗಬೇಕು ಎಂದು ಬಿ.ವೈ. ರಾಘವೇಂದ್ರ ಕರೆ ನೀಡಿದರು.
ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮದ ಸಂದರ್ಭದಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ವಂದೇ ಮಾತರಂ ಗೀತೆಯನ್ನು ಗೌರವದಿಂದ ಹಾಡುವ ಪ್ರತಿಜ್ಞೆ ಮಾಡಬೇಕು ಎಂದರು.
ರೈತರು ಮತ್ತು ಯೋಧರು ದೇಶದ ಎರಡು ಕಣ್ಣುಗಳು
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರೈತರು ಕಷ್ಟಪಟ್ಟು ದುಡಿದಾಗ ಮಾತ್ರ ದೇಶದ ಜನತೆಗೆ ಅನ್ನ ದೊರೆಯುತ್ತದೆ. ಅದೇ ರೀತಿ ದೇಶದ ಗಡಿಯನ್ನು ಕಾಯುವ ಯೋಧರು ನಮ್ಮೆಲ್ಲರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅನ್ನ ನೀಡುವ ರೈತರು ಹಾಗೂ ಗಡಿ ಕಾಯುವ ಯೋಧರು ದೇಶದ ಎರಡು ಕಣ್ಣುಗಳಿದ್ದಂತೆ. ಅವರು ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
Also read>> ಸಾಗರ ಪೊಲೀಸರ ದಾಳಿ: ತೋಟದಲ್ಲಿ ಬೆಳೆದಿದ್ದ 2.10 ಲಕ್ಷ ರೂ. ಮೌಲ್ಯದ ಗಾಂಜಾ ಗಿಡ ವಶ, ಇಬ್ಬರ ಬಂಧನ
ಶಿವಮೊಗ್ಗ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ
ಕಳೆದ ಹತ್ತು ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ರೈಲ್ವೆ, ವಿಮಾನಯಾನ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನರು ನೀಡಿದ ಅವಕಾಶ ಹಾಗೂ ಆಶೀರ್ವಾದವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಕಾರ್ಯಗಳ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಯುವಜನತೆ ತಮ್ಮ ಪೋಷಕರ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು, ಶಿಸ್ತು ಮತ್ತು ದೇಶಭಕ್ತಿಯೊಂದಿಗೆ ಮುನ್ನಡೆಯಬೇಕು. ವೈಯಕ್ತಿಕ ಪ್ರಗತಿಯ ಜೊತೆಗೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ದೇಶಭಕ್ತಿ ಗೀತೆಗಳು, ಭಾಷಣಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿ ಡಾ. ಜಿ.ಎಸ್. ಶಿವಕುಮಾರ್, ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವೀರೇಂದ್ರ, ವಿಶ್ವನಾಥ, ರವೀಂದ್ರ, ಪ್ರಶಾಂತ್ ಹೆಚ್.ಡಿ., ಪ್ರಶಾಂತ ಕುಬಸದ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಧಿತ್ರಿ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನಾ ಸ್ವಾಗತಿಸಿದರು. ಚೇತನ್ ವಂದನಾರ್ಪಣೆ ನೆರವೇರಿಸಿದರು. ಅಮೀರ ಸುಲ್ತಾನ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










