ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವದೇಶಿ (Swadeshi Products) ಉತ್ಪನ್ನಗಳಿಗೆ ಆದ್ಯತೆ ನೀಡುವ ಜೊತೆಗೆ ಸ್ವರಾಜ್ಯದ ಜವಾಬ್ದಾರಿ ಹಾಗೂ ಸ್ವಾವಲಂಬನೆಯ ಮನೋಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕು. ಆ ಮೂಲಕ ದೇಶದ ಆರ್ಥಿಕತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು (Shivamogga)ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಕರೆ ನೀಡಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಶನಿವಾರ ಆಡಳಿತ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಹಾಗೂ ಆದರ್ಶಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಸ್ವಾತಂತ್ರ್ಯಾನಂತರದ ಪೀಳಿಗೆಗೆ ದಾಸ್ಯದ ದಿನಗಳ ನೋವು ಮತ್ತು ಸಂಕಷ್ಟಗಳ ನೇರ ಅನುಭವವಿಲ್ಲ. ಹೀಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಮರೆಯುವುದು ಇತಿಹಾಸಕ್ಕೆ ಮಾಡುವ ದೊಡ್ಡ ಅಪಚಾರವಾಗುತ್ತದೆ. ಅವರ ತ್ಯಾಗ ಮತ್ತು ಹೋರಾಟದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಗಾಂಧೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು
ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆಯಿತು. ಗಾಂಧೀಜಿ ಅವರು ನಂಬಿದ್ದ ಮೌಲ್ಯಗಳ ಮೇಲಿನ ಅಚಲ ಬದ್ಧತೆಯೇ ಅವರನ್ನು ‘ಮಹಾತ್ಮ’ರನ್ನಾಗಿ ಮಾಡಿತು. ಇಂದು ಅವರ ಸ್ವದೇಶಿ, ಸ್ವರಾಜ್ಯ, ಸ್ವಾವಲಂಬನೆ ಹಾಗೂ ಮೌಲ್ಯಾಧಾರಿತ ಬದುಕಿನ ಪರಿಕಲ್ಪನೆಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಅಗತ್ಯವಿದೆ ಎಂದು ಎಸ್.ಎನ್. ನಾಗರಾಜ ಹೇಳಿದರು.
ಸ್ವದೇಶಿ ಎಂದರೆ ಕೇವಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದಲ್ಲ. ನಮ್ಮ ನೆಲ, ಜಲ ಮತ್ತು ಜನರಿಗೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವುದು ಹಾಗೂ ಅನಗತ್ಯ ಉತ್ಪಾದನೆಯ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡದಿರುವುದು ಕೂಡ ಸ್ವದೇಶಿ ಚಿಂತನೆಯ ಭಾಗವಾಗಿದೆ ಎಂದರು.
ಇತರ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸಿದರೂ, ಯಾವುದೇ ದೇಶದ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು. ಸ್ವಾವಲಂಬನೆ ಇಲ್ಲದ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಗಾಂಧೀಜಿಯವರ ಎಚ್ಚರಿಕೆಯನ್ನು ಇಂದಿನ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ಅಗತ್ಯ
ಗಾಂಧೀಜಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದರು. ಮಾನವ ಸಂಪನ್ಮೂಲವನ್ನು ಕಡೆಗಣಿಸಿ ಕೇವಲ ಯಂತ್ರಗಳು ಮತ್ತು ತಂತ್ರಜ್ಞಾನಗಳ ಮೇಲೆ ಅವಲಂಬಿತರಾಗುವುದನ್ನು ಅವರು ವಿರೋಧಿಸಿದ್ದರು. ಮಾನವ ಶ್ರಮ ಹಾಗೂ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಸಮೂಹದ ಮೂಲಕ ಉತ್ಪಾದನೆ ನಡೆಯಬೇಕು ಎಂಬುದು ಅವರ ಆರ್ಥಿಕ ಚಿಂತನೆಯ ಪ್ರಮುಖ ಆಶಯವಾಗಿತ್ತು ಎಂದು ವಿವರಿಸಿದರು.
ಬದುಕನ್ನು ಕಟ್ಟಿಕೊಡುವ ಶಿಕ್ಷಣ ಅಗತ್ಯ
ಶಿಕ್ಷಣ ಕ್ಷೇತ್ರದಲ್ಲಿಯೂ ಗಾಂಧೀಜಿ ವಿಶಿಷ್ಟ ದೃಷ್ಟಿಕೋನ ಹೊಂದಿದ್ದರು. ಮಕ್ಕಳು ಸಂತೋಷದಿಂದ ಕಲಿಯಬೇಕು. ವಿದ್ಯಾಭ್ಯಾಸದ ಜೊತೆಗೆ ಜೀವನೋಪಾಯಕ್ಕೆ ಅಗತ್ಯವಾದ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರು ಮೂಲ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಿದ್ದರು.
ಶಿಕ್ಷಣವು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಬದುಕನ್ನು ಕಟ್ಟಿಕೊಡುವ ಪ್ರಾಯೋಗಿಕ ಜ್ಞಾನವಾಗಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಚಿಂತನೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
Also read>> ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿದ ಪ್ರಾಚಾರ್ಯ ಡಾ. ಎಂ. ವೀರೇಂದ್ರ
ಮೌಲ್ಯಾಧಾರಿತ ಬದುಕು ಅಗತ್ಯ
ಇಂದು ಅಗತ್ಯಕ್ಕೆ ತಕ್ಕಂತೆ ಬದುಕುವ ಬದಲು ಅತಿಯಾದ ಅವಲಂಬನೆ ಮತ್ತು ಬಳಕೆಯ ಸಂಸ್ಕೃತಿಗೆ ಒಳಗಾಗುತ್ತಿರುವ ಪರಿಣಾಮ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಮಹಿಳೆಯರ ಸುರಕ್ಷತೆಯಂತಹ ಗಂಭೀರ ಸವಾಲುಗಳೂ ಸಮಾಜದ ಮುಂದಿವೆ. ಇವೆಲ್ಲವೂ ನಾವು ಮೌಲ್ಯಾಧಾರಿತ ಬದುಕಿನಿಂದ ದೂರ ಸರಿಯುತ್ತಿರುವುದನ್ನು ಸೂಚಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಶಕ್ತಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಈ ಬದಲಾವಣೆ ಕೇವಲ ಕಾನೂನುಗಳಿಂದ ಸಾಧ್ಯವಿಲ್ಲ. ಮೌಲ್ಯಾಧಾರಿತ ಶಿಕ್ಷಣ, ಸ್ವಾವಲಂಬನೆಯ ಚಿಂತನೆ ಮತ್ತು ಗಾಂಧೀಜಿಯವರ ಆದರ್ಶಗಳ ಅನುಷ್ಠಾನದಿಂದ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ದೇಶಭಕ್ತಿ ಗೀತೆಗಳ ಗಾಯನ
ಕಾರ್ಯಕ್ರಮದಲ್ಲಿ ಎನ್ಇಎಸ್ ಖಜಾಂಚಿ ಡಿ.ಜಿ. ರಮೇಶ್ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕರಾದ ಎಚ್.ಸಿ. ಶಿವಕುಮಾರ್, ಮಧುರಾವ್, ಆಜೀವ ಸದಸ್ಯರಾದ ರುಕ್ಮಿಣಿ ವೇದವ್ಯಾಸ, ಜಗದೀಶ್, ಮಲ್ಲಪ್ಪ, ರಾಮಪ್ರಸಾದ್, ಆನಂದ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಎನ್.ಎಂ. ಕಾಲೇಜಿನ ಸಿಬ್ಬಂದಿ ವರ್ಗದವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಹಿರಿಯ ವಿದ್ಯಾರ್ಥಿಗಳಾದ ಮೇದಿನಿ ಮತ್ತು ಸುನೇತ್ರ ಅವರು ‘ವಂದೇ ಮಾತರಂ’ ಗೀತೆಯನ್ನು ಹಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









