ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಯಕತ್ವ ಎನ್ನುವುದು ಒಂದು ಸರಪಳಿಯಲ್ಲ; ಅದು ನಾವು ಹೊತ್ತುಕೊಂಡು ಸಾಗಬೇಕಾದ ಜವಾಬ್ದಾರಿಯಾಗಿದೆ ಎಂದು ಶಿವಮೊಗ್ಗದ ಕಿಮ್ಮನೆ ಲಕ್ಸುರಿ ಗಾಲ್ಫ್ ರೆಸಾರ್ಟ್‌ನ ಗ್ರೂಪ್ ಜನರಲ್ ಮ್ಯಾನೇಜರ್ (ಆಪರೇಷನ್ಸ್) ದೇವೇಂದ್ರ ಪ್ರತಾಪ್ ಸಿಂಗ್ ಹೇಳಿದರು.
ನಗರದ ಪಿಇಎಸ್‌ಐಎಎಂಎಸ್ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಬಿಬಿಎ ವಿದ್ಯಾರ್ಥಿಗಳಿಗಾಗಿ ‘Leadership and Process Excellence in Hospitality, Tourism & Event Management’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಆತಿಥ್ಯ ಕ್ಷೇತ್ರದಲ್ಲಿ ನಾಯಕತ್ವ, ಜವಾಬ್ದಾರಿತನ ಹಾಗೂ ವೃತ್ತಿಪರತೆಗೆ ಹೆಚ್ಚಿನ ಮಹತ್ವವಿದೆ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಎಲ್ಲ ರೀತಿಯ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರಸ್ತುತ ಆತಿಥ್ಯ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿಗಳು ಹಾಗೂ ಸವಾಲುಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಟೆಲ್ ಮತ್ತು ರೆಸಾರ್ಟ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಗ್ರಾಹಕರ ಮನತೃಪ್ತಿಗೊಳಿಸುವ ಗುಣಮಟ್ಟದ ಸೇವೆ ನೀಡುವುದು ಈ ಕ್ಷೇತ್ರದ ಪ್ರಮುಖ ಅಗತ್ಯವಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರವೂ ವಿಶಾಲ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿದ್ದು, ಉದ್ಯೋಗ ಹಾಗೂ ವೃತ್ತಿ ಬೆಳವಣಿಗೆಗೆ ಹಲವು ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು.
Also read>> ಶಿವಮೊಗ್ಗದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ | ಈ ಬಾರಿ ಏನೆಲ್ಲಾ ವಿಶೇಷ ಇತ್ತು?
ವಿದ್ಯಾರ್ಥಿಗಳು ವೃತ್ತಿಪರತೆ, ವ್ಯಕ್ತಿತ್ವ ವಿಕಸನ ಹಾಗೂ ಅಗತ್ಯ ತರಬೇತಿಗಳನ್ನು ಸೂಕ್ತ ಸಮಯದಲ್ಲಿ ಪೂರ್ಣಗೊಳಿಸಿಕೊಂಡು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ದೇವೇಂದ್ರ ಪ್ರತಾಪ್ ಸಿಂಗ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ.ಎಂ. ಮಾತನಾಡಿ, ಇಂತಹ ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಿದ ನಂತರದ ವೃತ್ತಿಜೀವನದ ಕುರಿತು ಅಗತ್ಯ ಮಾರ್ಗದರ್ಶನ ನೀಡುತ್ತವೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಯಾವ ರೀತಿಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ತಮ್ಮ ಗುರಿ ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ., ಟಿ&ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ್, ಹೆಚ್‌ಇಎಂ ವಿಭಾಗದ ಉಪನ್ಯಾಸಕ ಉತ್ಕರ್ಷ್ ಸಿಂಗ್ ಸೇರಿದಂತೆ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಬಿಬಿಎ, ಬಿಬಿಎ (ಟಿ&ಟಿ) ಹಾಗೂ ಬಿಬಿಎ (ಹೆಚ್‌ಇಎಂ) ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನೌಶೀನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಜಿ.ಬಿ. ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










