ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (Indian Labor Union) ಶಿವಮೊಗ್ಗ (Shivamogga) ಜಿಲ್ಲಾ ಶಾಖೆ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಯಿತು.
ನಗರದ ಪಾಲಿಕೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಹಸ್ರಾರು ಕಾರ್ಮಿಕರು ಮೆರವಣಿಗೆಯಲ್ಲಿ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಹಿಂಪಡೆಯದೆ ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಪಿಎಫ್-95 ಪಿಂಚಣಿಯನ್ನು ಪ್ರಸ್ತುತ ₹1,000ರಿಂದ ₹7,500ಕ್ಕೆ ಹೆಚ್ಚಿಸಬೇಕು. ಇಎಸ್‌ಐ ವ್ಯಾಪ್ತಿಯ ವೇತನ ಮಿತಿಯನ್ನು ₹21 ಸಾವಿರದಿಂದ ₹42 ಸಾವಿರಕ್ಕೆ ಹೆಚ್ಚಿಸಿ ಹೆಚ್ಚಿನ ಕಾರ್ಮಿಕರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಇಪಿಎಫ್ ವಂತಿಗೆ ಮಿತಿಯನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹಾಗೂ ಬೋನಸ್ ಮಿತಿಯನ್ನು ₹7 ಸಾವಿರದಿಂದ ₹18 ಸಾವಿರಕ್ಕೆ ಹೆಚ್ಚಿಸಬೇಕು. ಉಪಧನದ ಅವಧಿಯನ್ನು 15 ದಿನಗಳಿಂದ ಒಂದು ತಿಂಗಳಿಗೆ ಹೆಚ್ಚಿಸುವುದರ ಜೊತೆಗೆ, ಅದರ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
Also read>> ಶಿವಮೊಗ್ಗದಲ್ಲಿ ಬರೋಬ್ಬರಿ 70 ಆಟೋಗಳು ಸೀಜ್! ಕಾರಣವೇನು? ಏನಾಯ್ತು?
ಎಲ್ಲಾ ವಿಭಾಗದ ಕಾರ್ಮಿಕರಿಗೆ ಇಪಿಎಫ್ ಹೆಚ್ಚುವರಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಮಾಸಿಕ ಗೌರವಧನ ಹೆಚ್ಚಿಸಿ ಅವರನ್ನು ಕಾಯಂಗೊಳಿಸಬೇಕು. ಬ್ಯಾಂಕಿಂಗ್ ಉದ್ಯಮದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಒಳ ಮತ್ತು ಹೊರಗುತ್ತಿಗೆ ನೌಕರರಿಗೆ ಹುದ್ದೆಗಳನ್ನು ಮಂಜೂರು ಮಾಡಿ, ಅವರ ಸೇವಾವಧಿಯ ಆಧಾರದ ಮೇಲೆ ಕಾಯಂಗೊಳಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲಿರುವ ಒಳ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೈಬಿಡಬೇಕು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮಗ್ರ ತನಿಖೆ ನಡೆಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಲ್. ವಿಶ್ವನಾಥ್, ಕೆಎಸ್‌ಎಚ್‌ಸಿಒಎ ಹಾಗೂ ಬಿಎಂಎಸ್ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರಾದ ಶಂಕರ್ ಅವಗದಡಿ, ರುದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








