ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ಹ್ಯಾಟ್ರಿಕ್ ಹೀರೋ’ Shivarajkumar ಅವರು ಕನ್ನಡ ಚಿತ್ರರಂಗದ (Sandalwood) ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಅವರ ಸಿನಿ ಪಯಣ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದ್ದು, ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ‘ಕಬ್ಜ’ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಅವರ ಹೊಸ ಸಿನಿಮಾದ ಮೂಲಕ ಶಿವಣ್ಣ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಆರ್. ಚಂದ್ರು ನಿರ್ದೇಶನದ ಈ ಬಹುಭಾಷಾ ಸಿನಿಮಾವನ್ನು ‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್’ ಹಾಗೂ ‘ಆರ್.ಸಿ. ಸ್ಟುಡಿಯೋಸ್’ ಬ್ಯಾನರ್‌ಗಳ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಲು ಯೋಜಿಸಲಾಗಿದೆ. ಸಿನಿಮಾ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ.
ಈ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಆಗಸ್ಟ್ 28ರಂದು ಮುಂಬೈನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ. ‘ಕಬ್ಜ’ ಬಳಿಕ ನಿರ್ದೇಶಕ ಆರ್. ಚಂದ್ರು ಹಲವು ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದರು. ಇದೀಗ ಶಿವರಾಜ್‌ಕುಮಾರ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಕಥೆಯೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
ಬಹುಭಾಷಾ ತಾರೆಯರ ಸಂಗಮ
ಶಿವಣ್ಣ ಅಭಿನಯಿಸಲಿರುವ ಈ ಚಿತ್ರ ದೊಡ್ಡ ಕ್ಯಾನ್ವಾಸ್‌ನಲ್ಲಿ ಮೂಡಿಬರಲಿದೆ ಎನ್ನಲಾಗಿದೆ. ವಿವಿಧ ಚಿತ್ರರಂಗಗಳ ಪ್ರಮುಖ ಪ್ರತಿಭೆಗಳನ್ನು ಒಂದೇ ಸಿನಿಮಾದಲ್ಲಿ ಸೇರಿಸುವ ಯೋಜನೆಯನ್ನು ಚಿತ್ರತಂಡ ಹೊಂದಿದೆ. ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಈ ಯೋಜನೆಗೆ ಬೆಂಬಲವಾಗಿ ನಿಂತಿದ್ದು, ಹಲವು ಭಾಷೆಗಳ ಪ್ರಮುಖ ಕಲಾವಿದರನ್ನು ಚಿತ್ರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಶಿವರಾಜ್‌ಕುಮಾರ್ ಅವರಿಗೆ ಈ ಹಿಂದಿ ಸಿನಿಮಾ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ. ಕನ್ನಡದಾಚೆಗೂ ತಮ್ಮ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡಿರುವ ಶಿವಣ್ಣ, ಇದೀಗ ಬಾಲಿವುಡ್ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ
ಸದ್ಯ ಶಿವರಾಜ್‌ಕುಮಾರ್ ಕೈಯಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳಿವೆ. ತಮಿಳಿನ ‘ಜೈಲರ್ 2’, ತೆಲುಗಿನ ‘ಗುಮ್ಮಡಿ ನರಸಯ್ಯ’, ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾಗಳು ಪ್ರಮುಖವಾಗಿವೆ. ಇದರ ಜೊತೆಗೆ ಶ್ರೀನಿ ನಿರ್ದೇಶನದ ‘ಎ ಫಾರ್ ಆನಂದ್’, ಹೇಮಂತ್ ಎಂ. ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹಾಗೂ ‘ಡ್ಯಾಡ್’ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ.
ಈ ನಡುವೆ ಆರ್. ಚಂದ್ರು ನಿರ್ದೇಶನದ ಹಿಂದಿ ಸಿನಿಮಾದ ಘೋಷಣೆ ಶಿವಣ್ಣ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಆಗಸ್ಟ್ 28ರಂದು ಚಿತ್ರದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾದ ಬಳಿಕ ಸಿನಿಮಾದ ಕಥೆ, ತಾರಾಗಣ ಹಾಗೂ ತಾಂತ್ರಿಕ ತಂಡದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








