ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಹೆಬ್ಬಾಳದ ಪ್ಯಾರಾಮೌಂಟ್ ಮುಂಭಾಗದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು, ಇಸ್ರೋದ ಕೊಡುಗೆ ಹಾಗೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಅಗತ್ಯ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮವನ್ನು ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷೆ ಹಾಗೂ ಶಿಕ್ಷಕಿ ವಿಜಯಲಕ್ಷ್ಮಿ ಸುರೇಶ್ ಜೋಶಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಪಾತ್ರ ವಹಿಸುತ್ತಿದ್ದು, ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.
Indian Space : ಇಸ್ರೋ ವಿಜ್ಞಾನಿಗಳ ಸಾಧನೆಗೆ ಅಭಿನಂದನೆ
ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿ ದೇಶದ ಬಾಹ್ಯಾಕಾಶ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮ ಮತ್ತು ಸಾಧನೆಗೆ ಅಭಿನಂದನೆ ಸಲ್ಲಿಸಿದ ವಿಜಯಲಕ್ಷ್ಮಿ ಸುರೇಶ್ ಜೋಶಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇಂದು ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನವು ಕೇವಲ ಬಾಹ್ಯಾಕಾಶ ಸಂಶೋಧನೆಗೆ ಸೀಮಿತವಾಗಿಲ್ಲ. ಮಾನವನ ಸಮಗ್ರ ಕಲ್ಯಾಣ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಸಂವಹನ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಬಾಹ್ಯಾಕಾಶ ತಂತ್ರಜ್ಞಾನ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.
Also read>> ಚಿಕ್ಕಮಗಳೂರು : 40 ಅಡಿ ಟಿಪ್ಪು ಸುಲ್ತಾನ್ ಕಟೌಟ್ಗೆ ಪಾಕ್ ಹಾಡು ಬಳಕೆ ಆರೋಪ: ಪ್ರಕರಣ ದಾಖಲು
ದೇಶದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬಾಹ್ಯಾಕಾಶ ಸಂಸ್ಥೆಗಳು ಮಹತ್ವದ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಯುವಜನತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಬೇಕು
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಕ್ಕೆ ಶುಭಾಶಯ ಕೋರಿದ ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಶರಣ್ಯ ಎಸ್. ಋಗ್ವೇದಿ, ಬಾಹ್ಯಾಕಾಶ ಕ್ಷೇತ್ರದ ಸಮಗ್ರ ಅಭಿವೃದ್ಧಿಯಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಮತ್ತು ಸಾಧನೆಗಳಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
ಭಾರತ ಜ್ಞಾನಿಗಳು ಹಾಗೂ ಪ್ರತಿಭಾವಂತರ ನಾಡಾಗಿದ್ದು, ದೇಶದ ಯುವಕರು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಯುವಕರು ಸಾಧನೆ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಶಿಕ್ಷಣ, ಕೃಷಿ, ಆರೋಗ್ಯ, ಕೈಗಾರಿಕೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಬದಲಾವಣೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ
ಭಾರತದ ಬುದ್ಧಿವಂತಿಕೆ ಮತ್ತು ಅಧ್ಯಯನಶೀಲತೆಯನ್ನು ಹೊಂದಿರುವ ಯುವಕರು ಹಾಗೂ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಿದೆ. ಹಿರಿಯರ ಮಾರ್ಗದರ್ಶನ ಮತ್ತು ಅನುಭವವನ್ನು ಬಳಸಿಕೊಂಡು ಯುವಪೀಳಿಗೆ ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಶರಣ್ಯ ಎಸ್. ಋಗ್ವೇದಿ ಕರೆ ನೀಡಿದರು.
ಭಾರತೀಯ ಯುವಕರು ತಮ್ಮ ಜ್ಞಾನ, ಪ್ರತಿಭೆ ಹಾಗೂ ತಾಂತ್ರಿಕ ಕೌಶಲ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಇಡೀ ಜಗತ್ತು ಬೆರಗಾಗುವ ರೀತಿಯಲ್ಲಿ ಭಾರತದಲ್ಲಿ ಬದಲಾವಣೆಗಳು ಸಂಭವಿಸಲಿವೆ. ಶ್ರೇಷ್ಠ ಭಾರತ ಮತ್ತು ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮಹತ್ವವನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಂದೇಶ ನೀಡಲಾಯಿತು. ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







