ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿರುವ ತಿದ್ದುಪಡಿ ನಿರ್ದೇಶನಗಳು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸಹಕಾರಿ ಹಿರಿಯ ಧುರೀಣ ಹಾಗೂ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಪಿ. ಶೇಷಾದ್ರಿ ಒತ್ತಾಯಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕುಗಳ ನಿರ್ದೇಶಕರಿಗೆ ಸಂಬಂಧಿಸಿದಂತೆ ಆರ್‌ಬಿಐ ಹೊರಡಿಸಿರುವ ತಿದ್ದುಪಡಿ ನಿಯಮಗಳನ್ನು ತೀವ್ರವಾಗಿ ವಿರೋಧಿಸಿದರು.
10 ವರ್ಷಗಳ ಬಳಿಕ 3 ವರ್ಷಗಳ ಕೂಲಿಂಗ್ ಪಿರಿಯಡ್
ಆರ್‌ಬಿಐನ ನಿಯಮ 7ಎ ಪ್ರಕಾರ, ರಾಜ್ಯ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕುಗಳ ನಿರ್ದೇಶಕರು ನಿರಂತರವಾಗಿ 10 ವರ್ಷಗಳ ಸೇವೆ ಸಲ್ಲಿಸಿದ ನಂತರ ಕಡ್ಡಾಯವಾಗಿ 3 ವರ್ಷಗಳ ಕೂಲಿಂಗ್ ಪಿರಿಯಡ್ ತೆಗೆದುಕೊಳ್ಳಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ ಈ ನಿಯಮವು ಸಹಕಾರಿ ತತ್ವಕ್ಕೆ ವಿರುದ್ಧವಾಗಿದೆ ಎಂದು ಶೇಷಾದ್ರಿ ಅಭಿಪ್ರಾಯಪಟ್ಟರು.
ಲಕ್ಷಾಂತರ ಸಹಕಾರಿಗಳು ಹಾಗೂ ರೈತರು ತಮ್ಮ ಜೀವನವನ್ನೇ ಸಹಕಾರಿ ಚಳವಳಿಗೆ ಮುಡಿಪಾಗಿಟ್ಟಿದ್ದಾರೆ. ಇಂತಹ ಹಿರಿಯ ಮತ್ತು ಅನುಭವಿ ವ್ಯಕ್ತಿಗಳನ್ನು ಕೇವಲ 10 ವರ್ಷಗಳ ಸೇವಾವಧಿಯ ನೆಪದಲ್ಲಿ ದೂರವಿಡುವುದು ಅವರ ಅನುಭವ ಮತ್ತು ಸೇವೆಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಹೇಳಿದರು.
Also read>> ಬ್ರಹ್ಮಾವರದಲ್ಲಿ ಭೀಕರ ಘಟನೆ: ಹೆತ್ತ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪುತ್ರ
ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಏಕೆ ಕೂಲಿಂಗ್ ಪಿರಿಯಡ್?
ಮೂರು ವರ್ಷಗಳ ಕೂಲಿಂಗ್ ಪಿರಿಯಡ್ ಅನ್ನು ಕೇವಲ ಸಹಕಾರಿ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಜಾರಿಗೆ ತರಲಾಗಿದೆ. ಆದರೆ ಇತರೆ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳಾದ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಇಂತಹ ಕೂಲಿಂಗ್ ಪಿರಿಯಡ್ ಜಾರಿಯಲ್ಲಿಲ್ಲ ಎಂದು ಅವರು ಪ್ರಶ್ನಿಸಿದರು.
ಸಹಕಾರಿ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಈ ನಿಯಮವನ್ನು ಅನ್ವಯಿಸುವುದು ಸಾಮಾಜಿಕ ಅನ್ಯಾಯ ಮಾಡಿದಂತಾಗಿದೆ ಎಂದು ಅವರು ಆರೋಪಿಸಿದರು.
ಅನುಭವದ ಕೊರತೆಯಿಂದ ಸಂಸ್ಥೆಗಳಿಗೆ ನಷ್ಟದ ಆತಂಕ
ಸಹಕಾರಿ ಬ್ಯಾಂಕಿಂಗ್ ಎಂಬುದು ಸಾಮಾನ್ಯ ವಾಣಿಜ್ಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲ. ಇದು ರೈತರು, ಪಿಎಲ್‌ಡಿ, ಡಿಸಿಸಿ ಬ್ಯಾಂಕುಗಳು ಹಾಗೂ ಗ್ರಾಮೀಣ ಸಾಲ ವ್ಯವಸ್ಥೆಯ ಸೂಕ್ಷ್ಮತೆಗಳನ್ನು ಅರಿತಿರಬೇಕಾದ ವಿಶಿಷ್ಟ ಕ್ಷೇತ್ರವಾಗಿದೆ ಎಂದು ಶೇಷಾದ್ರಿ ಹೇಳಿದರು.
ಅನುಭವವೇ ಇಲ್ಲದ ಹೊಸಬರು ನಿರ್ದೇಶಕರಾಗಿ ಬಂದರೆ, ಸಹಕಾರಿ ಕ್ಷೇತ್ರದ ಕಾರ್ಯವೈಖರಿಯ ಬಗ್ಗೆ ಸಮರ್ಪಕ ಅರಿವಿಲ್ಲದೆ ತಪ್ಪು ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸಹಕಾರಿ ಸಂಸ್ಥೆಗಳಿಗೆ ನಷ್ಟ ಉಂಟಾಗಿ, ಅದರ ಅಂತಿಮ ಹೊಡೆತ ರೈತ ಸದಸ್ಯರ ಮೇಲೆ ಬೀಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅಮಿತ್ ಶಾ ಮಧ್ಯಪ್ರವೇಶಕ್ಕೆ ಒತ್ತಾಯ
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಈ ತಿದ್ದುಪಡಿ ನಿಯಮವನ್ನು ಪುನಃ ಪರಿಶೀಲಿಸಬೇಕು. ಸಹಕಾರಿ ಕ್ಷೇತ್ರವು ಮೊದಲಿನ ರೀತಿಯಲ್ಲಿಯೇ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ, ಆರ್‌ಬಿಐಗೆ ಸೂಕ್ತ ಮನವಿ ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರದ ಹಿತಾಸಕ್ತಿಗೆ ವಿರುದ್ಧವಾದ ತಿದ್ದುಪಡಿ ನಿರ್ದೇಶನವನ್ನು ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್.ಪಿ. ಶೇಷಾದ್ರಿ ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









