ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುಮುಖಿ ವೇದಿಕೆಯ ವತಿಯಿಂದ (Shivamogga) ಶಿವಮೊಗ್ಗ ನಗರದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕತ್ತಲ ಹಾಡು’ ಕಾರ್ಯಕ್ರಮವು ಕೇವಲ ಹಾಡುಗಳ ಕಾರ್ಯಕ್ರಮವಾಗಿ ಉಳಿಯಲಿಲ್ಲ. ನಾದ ಮಣಿನಾಲ್ಕೂರು ಅವರ ಗಾಯನ ಹಾಗೂ (Song) ಹಾಡುಗಳ ನಡುವಿನ ಅರಿವಿನ ಮಾತುಗಳು ಕತ್ತಲನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸುವಂತಹ ಒಂದು ಆಂತರಿಕ ಅನುಭವವಾಗಿ ರೂಪುಗೊಂಡವು.
ಕತ್ತಲು ಎಂದರೆ ಕೇವಲ ಬೆಳಕಿನ ಅನುಪಸ್ಥಿತಿಯೇ? ಅಥವಾ ನಮ್ಮೊಳಗೆ ನಾವು ಕಾಣದೆ ಉಳಿಸಿಕೊಂಡಿರುವ ಯಾವುದೋ ಒಂದು ಭಾವಲೋಕವೇ? ಇಂತಹ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಕತ್ತಲ ಹಾಡು’ ಕಾರ್ಯಕ್ರಮ ಎಲ್ಲರನ್ನೂ ತನ್ನತ್ತ ಸೆಳೆಯಿತು.
ಕತ್ತಲನ್ನು ನೋಡುವ ರೀತಿ, ಸುತ್ತಲಿನ ಜಗತ್ತನ್ನು ಗ್ರಹಿಸುವ ಪರಿ, ಗೆಲುವಿನೊಳಗಿರುವ ಸೋಲನ್ನು ಸ್ವೀಕರಿಸುವ ಮನಸ್ಥಿತಿ ಹಾಗೂ ಸತ್ಯ ಮತ್ತು ನಿಜಗಳ ನಡುವಿನ ಸೂಕ್ಷ್ಮ ಅಂತರವನ್ನು ಗುರುತಿಸುವ ಸಾಮರ್ಥ್ಯ—ಇವೆಲ್ಲವೂ ಹಾಡಿನ ನಾದದೊಂದಿಗೆ ನಿಧಾನವಾಗಿ ಪ್ರೇಕ್ಷಕರೊಳಗೆ ಅಂತರ್ಯಾನ ಮಾಡಿಸಿದವು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅನೇಕರ ಬೆರಳುಗಳು ತಮ್ಮ ಹೃದಯದ ತಂತಿಯನ್ನು ಮೀಟುವಂತೆ ಚಲಿಸುತ್ತಿದ್ದವು. ಹೊರಗಿನ ವೇದಿಕೆಗಿಂತ ಪ್ರತಿಯೊಬ್ಬರ ಒಳಗಿನ ಅಂತರಂಗದ ವೇದಿಕೆಯೇ ದೊಡ್ಡದಾಗಿ ಕಾಣತೊಡಗಿತ್ತು.
ನಾದ ಮಣಿನಾಲ್ಕೂರು ಅವರ ಗಾಯನದ ವಿಶೇಷತೆ ಇದೇ ಆಗಿತ್ತು. ‘ಕತ್ತಲ ಹಾಡು’ ಕತ್ತಲೆಯನ್ನೇ ಕರಗಿಸುವಂತಿತ್ತು, ಹೃದಯದ ಭಾಷೆಯನ್ನು ಮೀಟುವಂತಿತ್ತು. ಸವಿತಾ ನಾಗಭೂಷಣ ಅವರ ಕವಿತೆಗಳಂತೆ, ಕನಕ ಕೃಷ್ಣರ ಆಳವಾದ ಬಾಂಧವ್ಯದ ಭಾವವನ್ನು ಸರಳವಾಗಿ ಸ್ಪುರಿಸುತ್ತಿತ್ತು. ಎಲುಬಿನ ಹಂದರದೊಳಗಿನ ಮಂದಿರವನ್ನು ತಲುಪುವಂತೆ, ಏಕಾಂಗಿಯಾಗಿ ಹೊರಟಾಗ ಯಾರಾದರೂ ಸಿಕ್ಕ ಬಗೆಯನ್ನು ಅರಿಯುವಂತೆ ಈ ಹಾಡುಗಳು ಮನಸ್ಸನ್ನು ಮುಟ್ಟಿದವು.
ಇಂದಿನ ಕಾಲಘಟ್ಟದ ಮನಸ್ಥಿತಿಗಳು ಮತ್ತು ಪರಿಸ್ಥಿತಿಗಳ ಕುರಿತು ಹಾಡುಗಳ ನಡುವಿನ ಅರಿವು ನುಡಿಗಳು ಸರಳವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡಿದವು. ಎಲ್ಲದರಲ್ಲೂ ಅಸಹನೆ ಮತ್ತು ಮನರಂಜನೆಯನ್ನೇ ಹುಡುಕುವ ಇಂದಿನ ಮನಸ್ಥಿತಿಯನ್ನು ಕಾರ್ಯಕ್ರಮ ಸೂಕ್ಷ್ಮವಾಗಿ ಎತ್ತಿ ಹಿಡಿಯಿತು.
ಬಹುಶಃ ಅದಕ್ಕಾಗಿಯೇ ಕಾರ್ಯಕ್ರಮ ಮುಗಿದ ಮೇಲೂ ಎಲ್ಲರ ಮನಸ್ಸಿನಲ್ಲಿ ಒಂದು ಅಜ್ಞಾತ ಏಕತಾರಿಯ ನಾದ ಕೇಳಿಸುತ್ತಲೇ ಇತ್ತು. ಕ್ಷಣಕಾಲ ಎಲ್ಲರನ್ನೂ ಸೋಲಿಸಿ, ಕತ್ತಲಿನಲ್ಲಿ ಕರಗಿಸಿ, ಒಳಗಿಳಿದು ನಮ್ಮ ನಮ್ಮ ಬೆರಳುಗಳಲ್ಲಿ ಅಜ್ಞಾತ ಏಕತಾರಿಯನ್ನು ಮೀಟಿಸಿದ ‘ಕತ್ತಲ ಹಾಡು’, ಬಹುಮುಖಿ ವೇದಿಕೆಯಲ್ಲಿ ನಡೆದ ಒಂದು ಕಾರ್ಯಕ್ರಮಕ್ಕಿಂತ ಹೆಚ್ಚಾಗಿ, ನಮ್ಮೊಳಗಿನ ನಮ್ಮನ್ನೇ ಮತ್ತೊಮ್ಮೆ ನೋಡಿಕೊಳ್ಳುವ ಅವಕಾಶವಾಗಿತ್ತು.
ಇಂತಹ ನಾದ ಎಲ್ಲರ ಕಿವಿಗೂ ಬೀಳಲಿ. ಮತ್ತೊಮ್ಮೆ, ಮಗದೊಮ್ಮೆ ನಮ್ಮೊಳಗಿನ ಆ ಮೌನದ ಏಕತಾರಿಯನ್ನು ಅರಿಯುವ ಅವಕಾಶಗಳು ಸಿಗಲಿ ಎಂಬ ಆಶಯ ಮೂಡಿಸಿದ ಅಪರೂಪದ ಕಾರ್ಯಕ್ರಮ ಇದಾಗಿತ್ತು.
– ಕವನ
ಬಿ.ಎ. ವಿದ್ಯಾರ್ಥಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









