ಕಲ್ಪ ಮೀಡಿಯಾ ಹೌಸ್ | ಸಾಗರ |
ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagara) ತಾಲೂಕಿನ ಮಡಸೂರು ಗ್ರಾಮದ ವಡ್ಡಿನಕೆರೆ ಸಮೀಪ ವ್ಯಕ್ತಿಯೊಬ್ಬರನ್ನು ಹರಿತವಾದ ಆಯುಧದಿಂದ ಕೊಲೆ (Murder) ಮಾಡಿರುವ ಭೀಕರ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಆನಂದ್ (38) ಎಂದು ಗುರುತಿಸಲಾಗಿದೆ. ಆನಂದ್ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಹೊರಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದ ಆನಂದ್
ಮಂಗಳವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಆನಂದ್ ಅವರು ಬೈಕ್ ತೆಗೆದುಕೊಂಡು ಮನೆಯಿಂದ ತೆರಳಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಹಿಂದಿರುಗಿರಲಿಲ್ಲ.
ಇದರಿಂದ ಆತಂಕಗೊಂಡ ಮನೆಯವರು ಆನಂದ್ ಅವರ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬದವರ ಆತಂಕ ಮತ್ತಷ್ಟು ಹೆಚ್ಚಾಯಿತು. ಬಳಿಕ ಸಂಬಂಧಿಕರು ಮತ್ತು ಕುಟುಂಬದವರು ಆನಂದ್ಗಾಗಿ ಹುಡುಕಾಟ ಆರಂಭಿಸಿದರು.
Sagara : ಕೆರೆ ಸಮೀಪ ಪತ್ತೆಯಾದ ಬೈಕ್, ಕಲ್ಲುಗಳ ನಡುವೆ ಶವ
ಹುಡುಕಾಟದ ವೇಳೆ ಮಡಸೂರು ಗ್ರಾಮದ ಕೆರೆ ಪಕ್ಕದ ರಸ್ತೆಯ ಬದಿಯಲ್ಲಿ ಆನಂದ್ ಅವರ ಬೈಕ್ ಪತ್ತೆಯಾಗಿದೆ. ಬೈಕ್ ಕಂಡ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಕಲ್ಲುಗಳ ನಡುವೆ ಆನಂದ್ ಅವರ ಶವ ಪತ್ತೆಯಾಗಿದೆ.
Also Read>> ಒಬ್ಬರ ಎಂಜಲನ್ನು ಮತ್ತೊಬ್ಬರು ಏಕೆ ತಿನ್ನಬಾರದು? ಅಡುಗೆ ಮಾಡುವಾಗ ಸೌಟನ್ನು ಹೇಗೆ ತಿರುಗಿಸಬೇಕು?
ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಮಾರಣಾಂತಿಕವಾಗಿ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತೀವ್ರ ರಕ್ತಸ್ರಾವದಿಂದಾಗಿ ಆನಂದ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರ ಭೇಟಿ, ತನಿಖೆ ಆರಂಭ
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಉಪಾಧೀಕ್ಷಕರು ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿನ ಪರಿಸ್ಥಿತಿ, ಮೃತದೇಹ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ ತನಿಖೆ ಆರಂಭಿಸಲಾಗಿದೆ.
ಕೊಲೆಗೆ ನಿಖರ ಕಾರಣವೇನು, ಆನಂದ್ ಅವರನ್ನು ಯಾರು ಮತ್ತು ಯಾವ ಕಾರಣಕ್ಕಾಗಿ ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








