ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ (Thirthahalli) ತಾಲೂಕಿನ ಹಾರೋಗೋಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳ್ ಗ್ರಾಮದಲ್ಲಿ ಬರೋಬ್ಬರಿ 14.5 ಅಡಿ ಉದ್ದ ಹಾಗೂ 27.75 ಕೆ.ಜಿ ತೂಕದ ಬೃಹತ್ ಹೆಬ್ಬಾವು (Python) ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.
ಕಡಿದಾಳ್ ಗ್ರಾಮದ ರಂಗಪ್ಪ ಗೌಡ ಅವರ ತೋಟದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಹೆಬ್ಬಾವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ತಜ್ಞ ಚಂದ್ರು ಕೆ. ನಾಯರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಂದ್ರು ಕೆ. ನಾಯರ್ ಅವರು, ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯರ ಸಮ್ಮುಖದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಚೀಲದಲ್ಲಿ ಬಂಧಿಸಿ, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಗಿದೆ.
Thirthahalli : ಇದುವರೆಗೆ 2,000ಕ್ಕೂ ಹೆಚ್ಚು ಹಾವುಗಳ ರಕ್ಷಣೆ
ತಮ್ಮ ಉರಗ ರಕ್ಷಣಾ ಕಾರ್ಯಾಚರಣೆಯಲ್ಲಿ ಇಷ್ಟೊಂದು ಭಾರವಾದ ಹೆಬ್ಬಾವನ್ನು ರಕ್ಷಿಸಿರುವುದು ಇದೇ ಮೊದಲ ಬಾರಿ ಎಂದು ಚಂದ್ರು ಕೆ. ನಾಯರ್ ಸಂತಸ ವ್ಯಕ್ತಪಡಿಸಿದ್ದಾರೆ.
Also read>> ಶ್ರೀಗುರುರಾಯರ 355ನೇ ಆರಾಧನೆ: ಚಿತ್ರದುರ್ಗದಲ್ಲಿ ಸಮೂಹ ನಿರ್ವಹಣೆ, ವೈದ್ಯಕೀಯ ಪ್ರತಿಸ್ಪಂದನಾ ಮಾದರಿ ವ್ಯವಸ್ಥೆ
ಚಂದ್ರು ಕೆ. ನಾಯರ್ ಅವರು ಇದುವರೆಗೆ 2,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ, ಅವುಗಳನ್ನು ಸುರಕ್ಷಿತವಾಗಿ ಅವುಗಳ ನೈಸರ್ಗಿಕ ವಾಸಸ್ಥಾನಗಳಿಗೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಬೃಹತ್ ಗಾತ್ರದ ಹೆಬ್ಬಾವನ್ನು ಯಾವುದೇ ಹಾನಿಯಾಗದಂತೆ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










