ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | 
ನಾಟ್ಯಂ ಭಿನ್ನ ರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ ಎಂಬ ಕವಿ ಕುಲ ಗುರು ಕಾಳಿದಾಸನ ಮಾತಿನಂತೆ ವಿಭಿನ್ನ ಆಸಕ್ತಿಯುಳ್ಳ ಮನಸುಗಳಿಗೆ ಅಹ್ಲಾದ ನೀಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವರು (Shivamogga) ಶಿವಮೊಗ್ಗದ ನೃತ್ಯ ಗುರು ಸಹನಾ ಚೇತನ್. ಅವರ ಹೆಸರು ಕೇಳಿದರೆ ತಕ್ಷಣಕ್ಕೆ ನೆನಪಾಗುವುದು “ಪ್ರತಿಭಾ ನವ ನವೋನ್ಮೇಷ ಶಾಲಿನೀ” ಎಂಬ ಸಂಸ್ಕೃತದ ಉಕ್ತಿ. ನಿಜಕ್ಕೂ ಹೊಸತನ್ನು ಪ್ರೇಕ್ಷಕರಿಗೆ ಉಣ ಬಡಿಸುವಲ್ಲಿ ಅವರ ಸಾಧನೆ ಶ್ಲಾಘನೀಯ.
ನಮ್ಮ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಜನರಿಗೆ ಪರಿಚಯಿಸುತ್ತಲೇ ಸಾಂಸ್ಕೃತಿಕ ಶ್ರೀಮಂತಿಕೆಗೆ ತಮ್ಮದೊಂದು ಪಾಲಿರಲಿ ಎಂದು ನಿರಂತರವಾಗಿ ತಮ್ಮ ನೃತ್ಯ ಶಾಲೆಯ 20 ವಸಂತಗಳನ್ನು ಪೂರೈಸಿದ್ದಾರೆ. ಅಸಾಧಾರಣವಾದ ಅವರ ಮತ್ತೊಂದು ಕೆಲಸವೆಂದರೆ, ನಾಟ್ಯಾರಾಧನಾ ಎಂಬ ಶೀರ್ಷಿಕೆ ಅಡಿಯಲ್ಲಿ ನಾಟ್ಯದ ಆರಾಧನೆಯನ್ನು 14 ವಸಂತಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವುದು. ಅಸಾಧಾರಣ ಎಂದು ಯಾಕೆ ಕರೆದೆ ಎಂದರೆ, ಅವರು ತಮ್ಮ ಶಿಷ್ಯರೇ ಅಲ್ಲದೆ ದೇಶದ ವಿವಿಧ ಮೂಲೆ ಮೂಲೆಗಳಿಂದ ವಿವಿಧ ನೃತ್ಯ ಪ್ರಕಾರಗಳನ್ನು ಶಿವಮೊಗ್ಗಕ್ಕೆ ಕರೆಸಿ, ಇಲ್ಲಿನ ಜನರಿಗೆ ಉಚಿತ ಪ್ರವೇಶ ಒದಗಿಸಿ ಹೃನ್ಮಮನಗಳಿಗೆ ಮುದನಿಡಿದವರು. ಅವರ ಆಲೋಚನಾ ಶೈಲಿಯೇ ವಿಭಿನ್ನ. ತನ್ನ ತರಗತಿಗಳಿಂದ ಹಣ ಬರುತ್ತದೆ ಎನ್ನುವ ಆಲೋಚನೆ ಹೊರತಾಗಿ ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬ ದಾಸವಾಣಿಯಂತೆ ತಾನು ಸಮಾಜದಿಂದ ಪಡೆದಿರುವುದನ್ನು ಮರಳಿ ಸಮಾಜಕ್ಕೆ ಬೇರೆ ಬೇರೆ ರೀತಿಗಳಲ್ಲಿ ಹಿಂದಿರುಗಿಸುವ ಕಾಯಕ ಇದೆಯಲ್ಲ ಅದು ನಿಜಕ್ಕೂ ಹೆಮ್ಮೆಯ ವಿಷಯ.
ಪ್ರತಿ ಸಲದ ನಾಟ್ಯಾರಾಧನೆಯೂ ಹೊಸತನಕ್ಕೆ ತನನ್ನು ತೆರೆದುಕೊಳ್ಳುತ್ತದೆ. ಅವರ ದೇವಿಯ ನೃತ್, ವಚನಗಳಿಗೆ ಮಾಡಿದ ನೃತ್ಯ, ದಾಸರ ಪದಗಳಿಗೆ ಮಾಡಿದ ಏಕವ್ಯಕ್ತಿ… ಹೇಳುತ್ತಾ ಹೋದರೆ ಸಾಲು ಸಾಲು ನೃತ್ಯಗಳು ಎಲ್ಲವೂ ನಿತ್ಯನೂತನವೇ. ಹೊಸತರ ಆಲೋಚನೆಯಲ್ಲಿ ಅವರಿಗೆ ಜೊತೆಯಾದ ಪತಿ ಚೇತನ್ ಅವರು ಸೇರಿ ಸಹಚೇತನವೇ ಆಗಿ ಹೋಗಿದ್ದಾರೆ.
ಅಜಿತಶ್ರೀ ಪುರಸ್ಕಾರ, ಭಾರತೀಯಂ, ಯುಗಾದಿ ಕವನ ಸಂಕಲನ ಹೀಗೆ ಒಂದು ನೃತ್ಯ ಶಾಲೆ ತನ್ನನ್ನು ತಾನು ಬಹುಮುಖಿಯಾಗಿ ಸಮಾಜಕ್ಕೆ ತೆರೆದುಕೊಳ್ಳುವುದಿದೆಯಲ್ಲ ಅದು ವಿಶೇಷವೇ ಸರಿ. ಕೇವಲ ಅವರ ತರಗತಿಗೆ ವಿದ್ಯಾರ್ಥಿಗಳೇ ನೃತ್ಯ ಆಯ್ಕೆ ಮಾಡಿ ಬರುವ ಶಿಷ್ಯರೇ ಅಲ್ಲದೇ, ಸ್ಲಂ ನಲ್ಲಿನ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿದ್ದಲ್ಲಿಗೆ ತಾವೇ ಹೋಗಿ ಅಲ್ಲಿ ತಮ್ಮದೇ ಖರ್ಚಿನಲ್ಲಿ ಆ ಮಕ್ಕಳಿಗೆ ವಸ್ತ್ರ ತರಿಸಿ, ಕಾರ್ಯಕ್ರಮ ಮಾಡಿ, ಆ ಶಾಲೆಯ ಮುಖ್ಯಸ್ಥರಿಗೆ ಉಡುಗೊರೆಯನ್ನೂ ನೀಡಿ ಎಲ್ಲ ಮಕ್ಕಳಿಗೂ ಊಟವನ್ನು ಕೂಡ ಹಾಕಿಸಿ ಕಳುಹಿಸುವ ಕಾಯಾಕವಂತೂ ಆದರ್ಶಪ್ರಾಯ. ಏಕೆಂದರೆ ಅವರಿಗೆ ಆ ಮಕ್ಕಳ ಮುಖದಲ್ಲಿನ ನಗುವೇ ಕಾಯಕತೃಪ್ತಿ.
ಭಾರತೀಯ ಕಲೆಗಳಲ್ಲಿ ಒಂದಾದ ನೃತ್ಯವನ್ನು ಎಲ್ಲರಿಗೂ ಎಟಕುವಂತೆ ಮಾಡಿ ಅದರ ರುಚಿ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರದೇ ಆದಂತಹ ಪ್ರೇಕ್ಷಕ ಅಭಿಮಾನಿ ಬಳಗವಿದೆ. ಎಲ್ಲರ ಮನೆ ಮನೆಗಳಿಗೂ ದಂಪತಿಗಳೇ ಹೋಗಿ ಆಹ್ವಾನ ಪತ್ರಿಕೆ ನೀಡುವುದು ಹೃದ್ಯದ ಕೆಲಸ ಎನ್ನುವಂತೆ ಆಸ್ಥೆಯಿಂದ ನಿರ್ವಹಿಸುತ್ತಾರೆ. ಇದೊಂದು ವಿಶೇಷವಾದರೆ ಮತ್ತೊಂದು ಶಿವಮೊಗ್ಗದ ಮಟ್ಟಿಗಂತೂ ಇನ್ನೊಂದು ಐತಿಹಾಸಿಕ ದಾಖಲೆ ಬರೆದ ಸಂಗತಿ ಎಂದರೆ ಅವರ ಹೊಚ್ಚ ಹೊಸ ಕಲ್ಪನೆ ಉಚಿತ ಸಾಮೂಹಿಕ ರಂಗಪ್ರವೇಶ. ಇದನ್ನು ಕಳೆದ ಬಾರಿ ಸಾಕಾರಗೊಳಿಸಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ. ಒಂದು ಮದುವೆಯಷ್ಟೇ ಹಣ ಖರ್ಚಾಗುವ ಈ ಕಾರ್ಯಕ್ರಮವನ್ನು ಉಚಿತವಾಗಿ, ಶಾಸ್ತ್ರೋಕ್ತವಾಗಿ ಆ ಎಲ್ಲ ವಿದ್ಯಾರ್ಥಿಗಳ ಮನೆ ಮನಗಳಲ್ಲಿ ಹಾಗೂ ಶಿವಮೊಗ್ಗದ ಜನತೆಯ ಮಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಾಗಿದ್ದಾರೆ.
ಒಟ್ಟಿನಲ್ಲಿ ಅನೇಕ ಹೊಸತನಗಳಿಗೆ ಪ್ರಥಮರಾಗಿ ತಾವು ತಮ್ಮ ಗುರುಗಳಿಂದ ಶ್ರದ್ಧೆಯಿಂದ ಕಲಿತ ವಿದ್ಯೆಯನ್ನು ಇಲ್ಲಿ ತಮ್ಮ ಶಿಷ್ಯರಿಗೆ ಅಷ್ಟೇ ಶ್ರದ್ಧೆಯಿಂದ ಕಲಿಸುತ್ತಾ ತಾವೂ ಗುರುವಾಗಿ ಆ ಪರಂಪರೆಯನ್ನು ಹೆಮ್ಮೆಯಿಂದ ಮುನ್ನಡೆಸುತ್ತಿದ್ದಾರೆ. ಭಾರತದ ವಿವಿಧ ಕಲಾ ಪ್ರಕಾರಗಳನ್ನು ನಾಟ್ಯಾರಾಧನೆಯಲ್ಲಿ ಶಿವಮೊಗ್ಗದ ಜನತೆಗೆ ಉಚಿತವಾಗಿ ಅದರ ಸವಿಯನ್ನು ಉಣಬಡಿಸುತ್ತಿದ್ದಾರೆ.
Shivamogga : 3 ದಿನಗಳ ಕಾಲ “ನಾಟ್ಯಾರಾಧನಾ -15
ಉತ್ತಮ ಆಯೋಜನೆ, ಸಂಘಟನೆ, ಕಲ್ಪನೆ ಈ ಎಲ್ಲವುಗಳಿಗೆ ಹರಿಕಾರರಾದ ವಿದುಷಿ ಸಹನಾ ಚೇತನ್ ಅವರು ಇಂದಿನಿಂದ 3 ದಿನಗಳ ಕಾಲ “ನಾಟ್ಯಾರಾಧನಾ -15 ರಾಷ್ಟ್ರೀಯ ನೃತ್ಯ ಮಹೋತ್ಸವ”ವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದಾರೆ. ಸಂಜೆ 6.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮ ಇಂದು ನಾಟ್ಯಾಲಯದ ವಿದ್ಯಾರ್ಥಿಗಳಿಂದ ಶಿವ ಲೀಲೆಗಳ ಅನಾವರಣ ಮಾಡುವ ಶಿವಾನುಭವಮ್ ನಿಂದ ಆರಂಭವಾಗುತ್ತದೆ.
Also Read>> AUMOVIO ಇಂಡಿಯಾದಿಂದ ದುಂತೂರು ಕೆರೆ ಪುನಶ್ಚೇತನ: 8 ಗ್ರಾಮಗಳ 1,700 ಕುಟುಂಬಗಳಿಗೆ ಜಲ ಭದ್ರತೆ
ನಾಳೆ ವಿದುಷಿ ಸಹನಾ ಚೇತನ್ ಅವರ ಏಕವ್ಯಕ್ತಿ ಪ್ರಸ್ತುತಿ ಪಂಡರಾಪುರದ ಭಕ್ತಿ ವೈಭವ ‘ ಪಾಂಡುರಂಗಮ್ ಭಜೇ’, ಹಾಗೂ ನಾಟ್ಯಾಲಯದ ವಿದ್ಯಾರ್ಥಿಗಳಿಂದ ವಿಶ್ವರೂಪಿಣಿಯ ನೃತ್ಯ ಮಾಧುರ್ಯ. ದಿನಾಂಕ 5 ರ ಸಂಜೆ ಧಾರವಾಡದ ಸಾಧನಕೇರಿಯ ಪ್ರತಿಭಾ ರಾಮಸ್ವಾಮಿ ಹಾಗೂ ಜನನಿ ಮುರಳಿ ಇವರಿಂದ ದ. ರಾ. ಬೇಂದ್ರೆ ಅವರ ನಾಕುತಂತಿ ಕೃತಿ ಆಧಾರಿತ ನೃತ್ಯ ಪ್ರಸ್ತುತಿ ಪ್ರತಿಬಿಂಬ ಹಾಗೂ ಕೋಲ್ಕತ್ತಾದ ಪ್ರಿಯಾಂಕಾ ಸಹ ಮತ್ತು ತಂಡದವರ ಕಥಕ್ ನೃತ್ಯ ಪ್ರಸ್ತುತಿ ಇದೆ. ಈ ಎಲ್ಲ ಕಾರ್ಯಕ್ರಮಗಳಿಗೆ ನಗರದ ಎಲ್ಲ ಕಲಾರಾಧಕರೂ ಆಗಮಿಸಿ ಕಲಾರಾಧನೆಗೆ ಸಾಕ್ಷಿಯಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










