ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನಿಂದ (Bengaluru) ಸುಮಾರು 30 ಕಿ.ಮೀ. ದೂರದ ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಹಾಗೂ ಶ್ರೀಕೃಷ್ಣ ಲೀಲೋತ್ಸವವನ್ನು ವೈಭವದಿಂದ ಆಚರಿಸಲಾಗುವುದು.
ಸೆ.4ರಂದು ಸಂಜೆ 5.00ಕ್ಕೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ನವನೀತ (ಬೆಣ್ಣೆ) ಅಲಂಕಾರ,ಸಂಜೆ 6.00ರಿಂದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ‘ನವನೀತಚೋರನಿಗೆ ನಾದನೀರಾಜನ’ ಕಾರ್ಯಕ್ರಮದಲ್ಲಿ ತುಮಕೂರಿನ ವಿದ್ವಾನ್ ವಿಜಯೇಂದ್ರ ಆಚಾರ್ಯ ಅವರಿಂದ ಗಾಯನ ಹಾಗೂ ವೇಣುವಾದನ ನಂತರ ನಾಮಸಂಕೀರ್ತನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ . ರಾತ್ರಿ 11.00 ಗಂಟೆಯಿಂದ ಪೂಜ್ಯ ಶ್ರೀಗಳಿಂದ ಬಾಲಕೃಷ್ಣನಿಗೆ ತೊಟ್ಟಿಲು ಪೂಜೆ ನೆರವೇರಲಿದ್ದು, ಮಧ್ಯರಾತ್ರಿ 12.00 ಗಂಟೆಗೆ ಚಂದ್ರೋದಯದ ಸಂದರ್ಭದಲ್ಲಿ ಅರ್ಘ್ಯ ಪ್ರದಾನ ನಡೆಯಲಿದೆ.
ಸೆ.5ರಂದು ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಚತುರ್ವೇದಭಾಷ್ಯಾಚಾರ್ಯ, ತಂಬಿಹಳ್ಳಿಯ ಶ್ರೀಮನ್ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪಾಂಚಜನ್ಯ ಪ್ರತಿಷ್ಠಾನ ಹಾಗೂ ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್ ಸಹಯೋಗದಲ್ಲಿ ಮಧ್ಯಾಹ್ನ 12.00 ಗಂಟೆಯಿಂದ ದಾಸ ನಮನ ವತಿಯಿಂದ ಶತಕಂಠ ಗಾಯನ, ಕೋಲಾಟ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Bengaluru : ಕೃಷ್ಣಭಕ್ತಿಯ ಕಲಾತ್ಮಕ ಲೋಕ
ಕಾಕೋಳು ಕ್ಷೇತ್ರವು ಧಾರ್ಮಿಕ, ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ವಿಶಿಷ್ಟವಾಗಿದೆ. ದೇವಾಲಯದ ಪರಿಸರದಲ್ಲಿ ಬೃಂದಾವನದ ಕೃಷ್ಣಲೀಲೆಯನ್ನು ನೆನಪಿಸುವ ಕಲಾತ್ಮಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತವೆ. ವೇಣುಗೋಪಾಲನ ದಿವ್ಯ ಸ್ವರೂಪದೊಂದಿಗೆ ವೇದವ್ಯಾಸರು, ಆಚಾರ್ಯ ಮಧ್ವರು, ಶ್ರೀಪಾದರಾಜರು, ಕನಕದಾಸರು ಹಾಗೂ ಪುರಂದರದಾಸರ ಸಾನ್ನಿಧ್ಯವನ್ನು ಕಲಾತ್ಮಕವಾಗಿ ಮೂಡಿಸಲಾಗಿದೆ.
ದೇವಾಲಯ ಪ್ರವೇಶಿಸಿದಾಗ ವ್ಯಾಸರಾಜರು ಪ್ರತಿಷ್ಠಾಪಿಸಿರುವ 732 ಹನುಮಂತ ವಿಗ್ರಹಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಕಂಬದ ಆಂಜನೇಯಸ್ವಾಮಿಯ ದರ್ಶನವೂ ದೊರೆಯುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವದಲ್ಲಿ ಭಗದ್ಭಕ್ತರು ತನು–ಮನ–ಧನ ಸಹಕಾರದೊಂದಿಗೆ ಭಾಗವಹಿಸಿ ಶ್ರೀ ವೇಣುಗೋಪಾಲಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಟ್ರಸ್ಟ್ ಮನವಿ ಮಾಡಿದೆ.
ವಿವರಗಳಿಗೆ: 9739369621, 98450 75250, 6364259787
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









