ಕಲ್ಪ ಮೀಡಿಯಾ ಹೌಸ್ | ರಾಣೆಬೆನ್ನೂರು |
ಸಾಹಸ, ಚಾರಣ ಹಾಗೂ ಪರಿಸರಾಸಕ್ತರಿಗಾಗಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (YHAI) ರಾಣೆಬೆನ್ನೂರಿನ (Ranebennur) ‘ಕೃಷ್ಣಮೃಗ ಘಟಕ’ದ ವತಿಯಿಂದ ‘ಬ್ಲ್ಯಾಕ್‌ಬಕ್ – ದಿ ಗೇಟ್‌ವೇ ಟು ನಾರ್ತ್ ಕರ್ನಾಟಕ’ ಹೆಸರಿನಲ್ಲಿ ನಾಲ್ಕು ದಿನಗಳ ರಾಜ್ಯ ಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರ ಆಯೋಜಿಸಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿರುವ ಈ ಶಿಬಿರವು ಸೆಪ್ಟೆಂಬರ್ 25ರಿಂದ 28, 2026ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ಒಟ್ಟು ಮೂರು ರಾತ್ರಿಗಳ ವಾಸ್ತವ್ಯ ಇರಲಿದೆ.
Ranebennur : ಶಿಬಿರದ ವಿಶೇಷತೆ
ಶಿಬಿರದಲ್ಲಿ ವಿವಿಧ ಚಾರಣ ಮಾರ್ಗಗಳು, ಪರಿಸರ ಅಧ್ಯಯನ, ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ಭೇಟಿ ಸೇರಿದಂತೆ ಹಲವು ಸಾಹಸಮಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಅನುಭವಿ ಮಾರ್ಗದರ್ಶಕರ ನೇತೃತ್ವದಲ್ಲಿ ಭಾಗವಹಿಸುವವರಿಗೆ ಉತ್ತರ ಕರ್ನಾಟಕದ ಪ್ರಕೃತಿ, ಪರಿಸರ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ.
ಸೆಪ್ಟೆಂಬರ್ 25ರಂದು ಸಂಜೆ 4ರಿಂದ 6 ಗಂಟೆಯೊಳಗೆ ರಾಣೆಬೆನ್ನೂರಿನ ಅಶೋಕ್ ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಓಂ ಆಸ್ಪತ್ರೆ ಬಳಿ ಭಾಗವಹಿಸುವವರು ವರದಿ ಮಾಡಿಕೊಳ್ಳಬೇಕು. ನಂತರ ವಾಹನದ ಮೂಲಕ ಅವರನ್ನು ಬೇಸ್‌ಕ್ಯಾಂಪ್‌ಗೆ ಕರೆದೊಯ್ಯಲಾಗುತ್ತದೆ.
ಸೆಪ್ಟೆಂಬರ್ 26ರಂದು ಮಲ್ಲಯ್ಯನ ಬೆಟ್ಟಕ್ಕೆ ಸುಮಾರು 12 ಕಿ.ಮೀ. ಚಾರಣ ನಡೆಯಲಿದ್ದು, ಇರಾಣಿ ದೇವಸ್ಥಾನ ಹಾಗೂ ಕದರಮಂಡಲಗಿ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತದೆ.
ಸೆಪ್ಟೆಂಬರ್ 27ರಂದು ಕೃಷ್ಣಮೃಗ ಅಭಯಾರಣ್ಯ ಹಾಗೂ ಚೌಡಯ್ಯದಾನಪುರ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ದೇವರಗುಡ್ಡಕ್ಕೆ ಮೂನ್‌ಲೈಟ್ (ಬೆಳದಿಂಗಳ) ಚಾರಣ ಆಯೋಜಿಸಲಾಗಿದ್ದು, ಒಟ್ಟು ಸುಮಾರು 18 ಕಿ.ಮೀ. ಚಾರಣ ಇರಲಿದೆ.
ಸೆಪ್ಟೆಂಬರ್ 28ರಂದು ವಿಶೇಷ ಕಾರ್ಯಕ್ರಮ ಹಾಗೂ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಮಧ್ಯಾಹ್ನದ ಊಟದ ಬಳಿಕ ಶಿಬಿರಾರ್ಥಿಗಳನ್ನು ಬೀಳ್ಕೊಡಲಾಗುತ್ತದೆ.
ಶಿಬಿರ ಶುಲ್ಕ ರೂ.6,500
ಶಿಬಿರದಲ್ಲಿ ಭಾಗವಹಿಸಲು ಪ್ರತಿ ವ್ಯಕ್ತಿಗೆ ರೂ.6,500 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕದಲ್ಲಿ ಶಿಬಿರದ ವಾಸ್ತವ್ಯ, ಪೌಷ್ಟಿಕ ಸಸ್ಯಾಹಾರಿ ಊಟ, ಅರಣ್ಯ ಪ್ರವೇಶ ಮತ್ತು ಚಾರಣ ಶುಲ್ಕ, ಸ್ಥಳೀಯ ಸಾರಿಗೆ ಹಾಗೂ ಪರಿಣಿತ ಮಾರ್ಗದರ್ಶಕರ ವೆಚ್ಚ ಒಳಗೊಂಡಿದೆ.
ನೋಂದಣಿಗೆ ಸೆಪ್ಟೆಂಬರ್ 12, 2026 ಕೊನೆಯ ದಿನಾಂಕವಾಗಿದ್ದು, ಆಸಕ್ತ ಪರಿಸರ ಹಾಗೂ ಚಾರಣಾಸಕ್ತರು ನಿಗದಿತ ಅವಧಿಯೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸಂಪರ್ಕಕ್ಕೆ
ಶಿಬಿರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಸಂಯೋಜಕರಾದ ಸುಧೀರ್ ಕುರುವತ್ತಿ – 94481 18237, ರೋಹಿತ್ ಅಗರ್ವಾಲ್ – 94498 56960 ಹಾಗೂ ಶಿಲ್ಪಾ ಎಂ. ಸಾವ್ಕಾರ್ – 98458 02364 ಅವರನ್ನು ಸಂಪರ್ಕಿಸಬಹುದು. ಇಮೇಲ್: yhai22k.rnr@gmail.com
ಈ ಶಿಬಿರವನ್ನು YHAI ರಾಣೆಬೆನ್ನೂರು ಕೃಷ್ಣಮೃಗ ಘಟಕದ ಕಾರ್ಯಾಧ್ಯಕ್ಷರಾದ ಡಾ. ಮನೋಜ್ ಸಾವುಕಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








