ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
1995ರ ನಂತರ ಆರಂಭಗೊಂಡಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದ ಅನುದಾನ ನೀಡುವಂತೆ ಆಗ್ರಹಿಸಿ ಶಿಕಾರಿಪುರದ (Shikaripura) ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ತಮ್ಮ ರಕ್ತದಲ್ಲಿ ಪತ್ರ (Blood Letter) ಬರೆದು ಗಮನ ಸೆಳೆದಿದ್ದಾರೆ.
ಶಿಕ್ಷಕ ಪ್ರಶಾಂತ್ ಅವರು ಸಿರಿಂಜ್ ಮೂಲಕ ತಮ್ಮ ರಕ್ತವನ್ನು ತೆಗೆದುಕೊಂಡು, ಅದೇ ರಕ್ತದಿಂದ ಪತ್ರ ಬರೆದಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವ ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಈ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
Shikaripura | ಅನುದಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ
1995ರ ನಂತರ ಆರಂಭಗೊಂಡಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ಹಲವು ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಅನುದಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಶಿಕ್ಷಕರು ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ, ಧರಣಿ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ನಡೆಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕಲ್ಪಿಸುವ ಕುರಿತು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ತಮ್ಮ ಬೇಡಿಕೆ ಈಡೇರಿಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನನ್ನ ರಕ್ತದಲ್ಲೇ ಕನ್ನಡವಿದೆ’ ಹೇಳಿಕೆಗೆ ಪ್ರತಿಕ್ರಿಯೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ‘ನನ್ನ ರಕ್ತದಲ್ಲೇ ಕನ್ನಡವಿದೆ’ ಎಂದು ಹೇಳಿದ್ದನ್ನು ನೆನಪಿಸಿಕೊಂಡಿರುವ ಶಿಕ್ಷಕ ಪ್ರಶಾಂತ್, ಇದೇ ಕಾರಣಕ್ಕೆ ಸಚಿವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಬೇಡಿಕೆಯನ್ನು ತಲುಪಿಸುತ್ತಿರುವುದಾಗಿ ಹೇಳಿದ್ದಾರೆ.
“ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದೆ ಹೇಳಿದ್ದರು. ಇದೇ ಕಾರಣಕ್ಕಾಗಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಮಾಧ್ಯಮ ಶಾಲೆಗಳಿಗೆ ರಕ್ತವೇ ಇಲ್ಲದಂತಾಗಿದೆ.”
-ಪ್ರಶಾಂತ್, ಶಿಕ್ಷಕ
ಬೇಡಿಕೆ ಈಡೇರದಿದ್ದರೆ ನವೆಂಬರ್ 1ರಂದು ಮತ್ತೊಂದು ಹೋರಾಟ
ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.
ತಾವು ಸ್ವತಃ ತಮ್ಮ ರಕ್ತದಿಂದ ಪತ್ರ ಬರೆದು ಸರ್ಕಾರದ ಗಮನ ಸೆಳೆದಿರುವುದಾಗಿ ತಿಳಿಸಿರುವ ಅವರು, ಬೇಡಿಕೆ ಈಡೇರದಿದ್ದರೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಕನ್ನಡ ಮಾಧ್ಯಮ ಶಾಲೆಗಳ ಇತರ ಶಿಕ್ಷಕರೂ ತಮ್ಮ ರಕ್ತದಿಂದಲೇ ಪತ್ರ ಬರೆಯುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Also Read>> ಪಿಂಕ್ ಪವರ್ ರನ್ 3.0: 20,000 ಸ್ಪರ್ಧಿಗಳಿಂದ ಸ್ತನ ಕ್ಯಾನ್ಸರ್ ಜಾಗೃತಿ
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡು, 1995ರ ನಂತರ ಆರಂಭಗೊಂಡಿರುವ ಶಾಲೆಗಳಿಗೆ ಅನುದಾನ ಕಲ್ಪಿಸಬೇಕು. ಶಿಕ್ಷಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಬೇಡಿಕೆಯಾಗಿದೆ.
ರಕ್ತದಲ್ಲಿ ಪತ್ರ ಬರೆಯುವ ಮೂಲಕ ಶಿಕ್ಷಕ ಪ್ರಶಾಂತ್ ನಡೆಸಿರುವ ಪ್ರತಿಭಟನೆ ಇದೀಗ ಶಿಕಾರಿಪುರದಲ್ಲಿ ಗಮನ ಸೆಳೆದಿದ್ದು, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







