ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಮಳೆನೀರು (rainwater) ಮೃತ ಜಲದಂತಿದ್ದು, ಅದನ್ನು ಸಮರ್ಪಕವಾಗಿ ಸಂಗ್ರಹಿಸಿ ಬಳಸುವ ಬದಲು ಚರಂಡಿಗೆ ಹರಿದುಹೋಗಲು ಬಿಡುತ್ತಿರುವುದು ವಿಷಾದನೀಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ *‘ಅನ್ನಬ್ರಹ್ಮ ಚಾತುರ್ಮಾಸ್ಯ’*ದ ಧರ್ಮಸಭೆಯಲ್ಲಿ ಸೆ.7ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹಿಂದಿನ ಕಾಲದಲ್ಲಿ ರಾಜರು ಮಳೆನೀರನ್ನು ಸುಯೋಗ್ಯವಾಗಿ ಸಂಗ್ರಹಿಸಿ ಕುಡಿಯುತ್ತಿದ್ದರು. ಸಮರ್ಪಕವಾಗಿ ಸಂಗ್ರಹಿಸಿದ ಮಳೆನೀರು ವರ್ಷಗಳ ಕಾಲ ಹಾಳಾಗದೆ ಸೇವನೆಗೆ ಯೋಗ್ಯವಾಗಿರುತ್ತದೆ. ಆದರೆ ಇಂದು ಮಳೆನೀರಿನ ಮಹತ್ವದ ಬಗ್ಗೆ ನಮಗೆ ಅರಿವೇ ಇಲ್ಲದಂತಾಗಿದೆ ಎಂದು ಹೇಳಿದರು.
ನೀರಿಗೆ ಸಮಾಧಾನ ನೀಡುವ ಶಕ್ತಿಯಿದೆ
ಮನುಷ್ಯನ ದಣಿವು, ಆಯಾಸ ಹಾಗೂ ಗಾಬರಿಯನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ನೀರಿಗೆ ಸಾಟಿಯಿಲ್ಲ. ಮಳೆನೀರಿಗೆ ಅಪರಿಮಿತ ಚೈತನ್ಯವಿದ್ದು, ಲೆಕ್ಕಕ್ಕೆ ಸಿಗದಷ್ಟು ಗುಣಗಳಿವೆ. ವಿವಿಧ ಕಾಲಘಟ್ಟಗಳ ಹಾಗೂ ಪ್ರದೇಶಗಳ ಆಯುರ್ವೇದ ಆಚಾರ್ಯರು ಮಳೆನೀರನ್ನು ಸೇವನೆಗೆ ಯೋಗ್ಯವೆಂದು ಪ್ರತಿಪಾದಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಆಯುರ್ವೇದದಲ್ಲಿ ಮಳೆನೀರಿನ ಪ್ರಮುಖ ಆರು ಗುಣಗಳನ್ನು ಉಲ್ಲೇಖಿಸಲಾಗಿದ್ದು, ಅದು ತಂಪು, ಶುದ್ಧ, ರುಚಿಕರ, ಕಲ್ಮಶರಹಿತ, ಮಂಗಳಕರ ಹಾಗೂ ಜೀರ್ಣಕ್ಕೆ ಲಘು ಎಂದು ವಿವರಿಸಲಾಗಿದೆ ಎಂದರು.
Also read>> ರಾಣೆಬೆನ್ನೂರಿನಲ್ಲಿ ‘ಬ್ಲ್ಯಾಕ್‌ಬಕ್’ ರಾಜ್ಯ ಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರ
ಗಾಂಗ ಜಲವೇ ಉತ್ಕೃಷ್ಟ
ಮಳೆನೀರನ್ನು ‘ಗಾಂಗ’ ಮತ್ತು ‘ಸಾಮುದ್ರ’ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಗಾಂಗ ಜಲವು ಸೇವನೆಗೆ ಅತ್ಯುತ್ತಮವಾದುದು. ಸಂಗ್ರಹಿಸಿದ ಮಳೆನೀರು ಗಾಂಗವೇ ಅಥವಾ ಸಾಮುದ್ರಕವೇ ಎಂಬುದನ್ನು ತಿಳಿಯಲು ಪ್ರಾಚೀನ ಕಾಲದಲ್ಲಿ ಹಲವು ಸರಳ ಪರೀಕ್ಷೆಗಳಿದ್ದವು. ಸಾಮಾನ್ಯವಾಗಿ ಆಶ್ವಯುಜ ಮಾಸದಲ್ಲಿ ಹಾಗೂ ದಕ್ಷಿಣ ದಿಕ್ಕಿನಲ್ಲಿ ಅಗಸ್ತ್ಯ ನಕ್ಷತ್ರ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಬೀಳುವ ಮಳೆನೀರು ಗಾಂಗ ಜಲವಾಗಿದ್ದು, ಅದು ಕುಡಿಯಲು ಉತ್ತಮೋತ್ತಮ ಎಂದು ಪ್ರಾಚೀನ ಮಹರ್ಷಿಗಳು ಸೂಚಿಸಿದ್ದಾರೆ ಎಂದು ಹೇಳಿದರು.
ಭೂಮಿಗೆ ಬಿದ್ದ ನೀರನ್ನು ಕುದಿಸಿ ಆರಿಸಿದರೆ ಅದು ಆ ದಿನಕ್ಕೆ ಮಾತ್ರ ಕುಡಿಯಲು ಯೋಗ್ಯವಾಗಿರುತ್ತದೆ. ಮರುದಿನ ಅದೇ ನೀರಿನ ಗುಣದಲ್ಲಿ ಬದಲಾವಣೆಯಾಗುತ್ತದೆ. ಹಿಂದಿನ ದಿನ ಜೀರ್ಣಕ್ಕೆ ಲಘುವಾಗಿದ್ದ ನೀರು ಮರುದಿನ ಗುರುವಾಗಿ ಜೀರ್ಣಕ್ರಿಯೆಗೆ ಕಷ್ಟಕರವಾಗುತ್ತದೆ. ಆದರೆ ಮಳೆನೀರು ಇದಕ್ಕೆ ಭಿನ್ನವಾಗಿದೆ ಎಂದು ಶ್ರೀಗಳು ನೀರಿನ ಕುರಿತಾದ ಹಲವು ಸೂಕ್ಷ್ಮ ಮಾಹಿತಿಗಳನ್ನು ವಿವರಿಸಿದರು.
Rainwater : ಮಣ್ಣಿನ ಗುಣದಿಂದ ನೀರಿನ ರುಚಿಯಲ್ಲೂ ಬದಲಾವಣೆ
ಮಳೆನೀರು ಯಾವ ರೀತಿಯ ಮಣ್ಣಿನ ಮೇಲೆ ಬೀಳುತ್ತದೆ ಎಂಬುದರ ಆಧಾರದಲ್ಲಿ ಅದರ ರುಚಿಯಲ್ಲೂ ವ್ಯತ್ಯಾಸವಾಗುತ್ತದೆ ಎಂಬುದನ್ನು ನಮ್ಮ ಪೂರ್ವಜರು ಸಂಶೋಧಿಸಿದ್ದರು. ಕಪ್ಪು ಮಣ್ಣಿನ ಮೇಲೆ ಬೀಳುವ ಮಳೆನೀರು ಸಿಹಿ ರಸವನ್ನು, ಬಿಳಿ ಮಣ್ಣಿನ ಮೇಲೆ ಬೀಳುವ ನೀರು ಒಗರು ರಸವನ್ನು ಹಾಗೂ ಪರ್ವತದ ತಪ್ಪಲಿನಲ್ಲಿ ಬೀಳುವ ನೀರು ಖಾರ ರಸವನ್ನು ಹೊಂದಿರುತ್ತದೆ ಎಂಬುದನ್ನು ಅವರು ಗುರುತಿಸಿದ್ದರು ಎಂದು ರಾಘವೇಶ್ವರ ಶ್ರೀಗಳು ವಿವರಿಸಿದರು.
ಮಳೆನೀರಿನ ಗುಣಗಳು ನಾಶವಾಗದಂತೆ ಬಂಗಾರ, ಬೆಳ್ಳಿ, ಮಣ್ಣು ಅಥವಾ ಗಾಜಿನ ಪಾತ್ರೆಗಳಲ್ಲಿ ಅದನ್ನು ಸಂಗ್ರಹಿಸಬೇಕು. ಮಳೆನೀರನ್ನು ಅಮೂಲ್ಯ ಸಂಪತ್ತಿನಂತೆ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಮಳೆನೀರನ್ನು ಚರಂಡಿಗೆ ಹರಿಯಲು ಬಿಡದೆ ಸಮರ್ಪಕವಾಗಿ ಸಂಗ್ರಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶ್ರೀಗಳು ಕರೆ ನೀಡಿದರು.
ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತರಾದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೆ ಹಾಗೂ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








