ಕಲ್ಪ ಮೀಡಿಯಾ ಹೌಸ್ | ನಾಗೋಯಾ |
ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ 2026ರ (Asian Games) ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್ ನೀರು ಧಾಂಡಾ (Neeru Dhanda) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ (Gold Medal) ಗೆದ್ದಿರುವ ಅವರು, ಈ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಚಿನ್ನ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಈ ಗೆಲುವಿನೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ ಐದನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
26 ವರ್ಷದ ಹರಿಯಾಣದ ನೀರು ಧಾಂಡಾ ಎಂಟು ಶೂಟರ್‌ಗಳು ಭಾಗವಹಿಸಿದ್ದ ಅಂತಿಮ ಸುತ್ತಿನಲ್ಲಿ 28 ಹಿಟ್‌ಗಳ ಸ್ಕೋರ್ ದಾಖಲಿಸಿ ಅಗ್ರಸ್ಥಾನ ಪಡೆದರು. ಈ ಮೂಲಕ ಮಹಿಳೆಯರ ವೈಯಕ್ತಿಕ ಟ್ರ್ಯಾಪ್‌ನಲ್ಲಿ ಇದ್ದ 24ರ ಹಿಂದಿನ ಏಷ್ಯನ್ ದಾಖಲೆಯನ್ನು ಮುರಿದು ಹೊಸ ಖಂಡಾಂತರ ದಾಖಲೆ ನಿರ್ಮಿಸಿದರು.
ಮೊದಲ ಭಾರತೀಯ ವೈಯಕ್ತಿಕ ಚಿನ್ನ
ನೀರು ಧಾಂಡಾ ಅವರ ಸಾಧನೆಯ ಮತ್ತೊಂದು ವಿಶೇಷವೆಂದರೆ, 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದಿರುವುದು. ಇದಕ್ಕೂ ಮುನ್ನ ಭಾರತದ ಚಿನ್ನದ ಪದಕಗಳು ತಂಡ ಅಥವಾ ಡಬಲ್ಸ್ ವಿಭಾಗಗಳಲ್ಲಿ ಬಂದಿದ್ದವು. ಹೀಗಾಗಿ ಧಾಂಡಾ ಅವರ ಗೆಲುವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಮಹಿಳೆಯರ ಟ್ರ್ಯಾಪ್ ತಂಡ ವಿಭಾಗದಲ್ಲಿಯೂ ನೀರು ಧಾಂಡಾ, ಆಶಿಮಾ ಅಹ್ಲಾವತ್ ಮತ್ತು ಮನೀಷಾ ಕೀರ್ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು. ತಂಡದ ಒಟ್ಟು ಸ್ಕೋರ್ 328 ಆಗಿತ್ತು. ಚೀನಾ ಚಿನ್ನ ಗೆದ್ದರೆ, ಕುವೈತ್ ಕಂಚಿನ ಪದಕ ಪಡೆದುಕೊಂಡಿತ್ತು.
Asian Games : ಚೀನಾ, ಕುವೈತ್ ಶೂಟರ್‌ಗಳಿಗೆ ಬೆಳ್ಳಿ, ಕಂಚು
ವೈಯಕ್ತಿಕ ಟ್ರ್ಯಾಪ್ ಫೈನಲ್‌ನಲ್ಲಿ ನೀರು ಧಾಂಡಾ 28 ಹಿಟ್‌ಗಳೊಂದಿಗೆ ಚಿನ್ನ ಗೆದ್ದರೆ, ಚೀನಾದ ಯುನಾಂಗ್ ಸನ್ 26 ಹಿಟ್‌ಗಳೊಂದಿಗೆ ಬೆಳ್ಳಿ ಪದಕ ಪಡೆದರು. ಕುವೈತ್‌ನ ಹಜರ್ ಅಬ್ದುಲ್ಮಾಲಿಕ್ 21 ಹಿಟ್‌ಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
Also Read>> ಷೇರುಪೇಟೆಯಲ್ಲಿ ಮತ್ತೆ ಭಾರೀ ಕುಸಿತ: ಸೆನ್ಸೆಕ್ಸ್ 1,800ಕ್ಕೂ ಹೆಚ್ಚು ಅಂಕ ಇಳಿಕೆ : ಕಾರಣಗಳೇನು?
ವಿಶ್ವಕಪ್‌ನಲ್ಲೂ ನಿರ್ಮಿಸಿದ್ದರು ದಾಖಲೆ
ನೀರು ಧಾಂಡಾ ಅವರ ಈ ಸಾಧನೆ ಆಕಸ್ಮಿಕವಲ್ಲ. 2026ರಲ್ಲಿ ಇಟಲಿಯ ಲೊನಾಟೊದಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ISSF ವಿಶ್ವಕಪ್‌ನಲ್ಲಿ ಮಹಿಳಾ ಟ್ರ್ಯಾಪ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ದಾಖಲೆಯನ್ನೂ ಅವರು ನಿರ್ಮಿಸಿದ್ದರು.
ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕದೊಂದಿಗೆ ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಸೇರಿಸಿಕೊಂಡಿರುವ ನೀರು ಧಾಂಡಾ, ಭಾರತೀಯ ಶೂಟಿಂಗ್‌ಗೆ ಮತ್ತೊಂದು ಮಹತ್ವದ ಅಧ್ಯಾಯ ಬರೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











