ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
“ಸರ್ಕಾರವಾಗಲಿ ಅಥವಾ ಖಾಸಗಿ ಸಂಸ್ಥೆಯಾಗಲಿ, ಜನರಿಗೆ ಸೇವೆ ಒದಗಿಸುವುದು ಮುಖ್ಯ. ರೋಗಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬುದೇ ನಮ್ಮ ಮೊದಲ ಆದ್ಯತೆ, ಇದಕ್ಕೆ ಪೂರಕವಾಗಿ (Manipal Hospitals) ಮಣಿಪಾಲ್ ಹಾಸ್ಪಿಟಲ್ಸ್ ಆರಂಭಿಸಿರುವ ಬೈಕ್ ಆಂಬ್ಯುಲೆನ್ಸ್ ಕಾರ್ಯ ನಿರ್ವಹಿಸಲಿ ಎಂದು (U.T. Khadar) ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಮಣಿಪಾಲ್ ಹಾಸ್ಪಿಟಲ್ಸ್ ಬೈಕ್ ತುರ್ತು ಪ್ರಥಮ ಪ್ರತಿಸ್ಪಂದಕರ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಸಂಚಾರ ದಟ್ಟಣೆಯಲ್ಲಿ ತುರ್ತು ವೈದ್ಯಕೀಯ ನೆರವು ತ್ವರಿತವಾಗಿ ತಲುಪಿಸಲು ಬೈಕ್ ಆಂಬ್ಯುಲೆನ್ಸ್ (Bike Ambulance) ಫಸ್ಟ್ ರೆಸ್ಪಾಂಡರ್ ವ್ಯವಸ್ಥೆಗಳು ಅತ್ಯಗತ್ಯವಾಗಿವೆ. ತುರ್ತು ಸಂದರ್ಭದಲ್ಲಿ ಕೆಲವೇ ನಿಮಿಷಗಳ ವಿಳಂಬವೂ ಜೀವಕ್ಕೆ ಅಪಾಯ ತರಬಹುದಾಗಿದ್ದು, ಮಣಿಪಾಲ್ ಆಸ್ಪತ್ರೆ ಈಗ ಆರಂಭಿಸಿರುವ ಬೈಕ್ ಆಂಬ್ಯುಲೆನ್ಸ್ ಸೇವೆ ಶ್ಲಾಘನೀಯವಾಗಿದೆ. ಜನರಿಗೆ ಆರೋಗ್ಯ ಸೇವೆ ವಿಳಂಬವಿಲ್ಲದೆ ತಲುಪಿಸಿ, ಗರಿಷ್ಠ ಜೀವಗಳನ್ನು ಉಳಿಸುವುದೇ ಇದರ ಮುಖ್ಯ ಉದ್ದೇಶವಾಗಬೇಕು ಹಾಗೂ ಈ ಉಪಕ್ರಮವನ್ನು ಇತರ ಆಸ್ಪತ್ರೆಗಳೂ ಅಳವಡಿಸಿಕೊಳ್ಳುವುದಕ್ಕೆ ಮಾದರಿಯಾಗಲಿದೆ ಎಂದರು.
ಮಣಿಪಾಲ್ ಆಸ್ಪತ್ರೆಯು ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಹೊಸ ಉಪಕ್ರಮಗಳನ್ನು ಪರಿಚಯಿಸುತ್ತಿದ್ದು, ಫಸ್ಟ್ ರೆಸ್ಪಾಂಡರ್ ಬೈಕ್ ಆಂಬ್ಯುಲೆನ್ಸ್ ಸೇವೆಯೂ ಅದೇ ರೀತಿಯ ಮತ್ತೊಂದು ಮಹತ್ವದ ಮಾದರಿ ಉಪಕ್ರಮವಾಗಿದೆ ಎಂದರು.
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಮಾತನಾಡಿ, “ಬೈಕ್ ಪ್ಯಾರಾಮೆಡಿಕ್ ಮೊದಲು ಘಟನಾ ಸ್ಥಳವನ್ನು ತಲುಪಿ, ರೋಗಿಯ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ತುರ್ತು ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಸ್ಪತ್ರೆಯ ತುರ್ತು ತಂಡಕ್ಕೆ ನೈಜ ಸಮಯದಲ್ಲಿ ರವಾನಿಸಲಾಗುತ್ತದೆ. ತುರ್ತು ಚಿಕಿತ್ಸೆಯಲ್ಲಿ ಪ್ರತಿ ನಿಮಿಷವೂ ಅಮೂಲ್ಯ. ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಆಂಬ್ಯುಲೆನ್ಸ್ ತಡವಾಗುವ ಸಾಧ್ಯತೆ ಇದೆ. ಈ ವಿಳಂಬವನ್ನು ಕಡಿಮೆ ಮಾಡಲು ‘ಮಣಿಪಾಲ್ ಫಸ್ಟ್ ರೆಸ್ಪಾಂಡರ್ ಸರ್ವಿಸ್’ ಆರಂಭಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಸುಮಾರು 10 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಆಂಬ್ಯುಲೆನ್ಸ್ ಬರುವವರೆಗೆ ಅಗತ್ಯ ತುರ್ತು ಚಿಕಿತ್ಸೆಯನ್ನು ನೀಡಲಿದ್ದಾರೆ. ಜೀವ ಉಳಿಸುವ ಕಾರ್ಯಕ್ಕೆ ಸಂಚಾರ ದಟ್ಟಣೆ ಅಡ್ಡಿಯಾಗದಿರುವುದೇ ನಮ್ಮ ಉದ್ದೇಶ.” ಎಂದರು.
“ತುರ್ತು ವೈದ್ಯಕೀಯ ಆರೈಕೆಯಲ್ಲಿ ನಂತರ ಸಾಂಪ್ರದಾಯಿಕ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದಾಗ, ರೋಗಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುತ್ತದೆ. “ಪ್ರತಿಯೊಂದು ಸೆಕೆಂಡ್ ಕೂಡ ಮುಖ್ಯ. ಬೆಂಗಳೂರಿನ ದಟ್ಟಣೆಯ ನಗರ ಸಂಚಾರದ ಮೂಲಕ ತುರ್ತು ವೈದ್ಯಕೀಯ ತಂಡಗಳು ರೋಗಿಯನ್ನು ತಲುಪುವುದು ಹಲವು ಬಾರಿ ಸವಾಲಾಗುತ್ತದೆ. ನಮ್ಮ ಟೂ-ವೀಲರ್ ಪ್ರಥಮ ಪ್ರತಿಸ್ಪಂದಕರ ಉದ್ದೇಶವೆಂದರೆ ನಿರ್ಣಾಯಕ ಗೋಲ್ಡನ್ ಸಮಯದಲ್ಲೇ ತಜ್ಞ ವೈದ್ಯಕೀಯ ನೆರವನ್ನು ರೋಗಿಯ ಬಳಿಗೆ ತಲುಪಿಸುವುದು. ಇದರಿಂದ ತ್ವರಿತ ಚಿಕಿತ್ಸೆಯನ್ನು ಆರಂಭಿಸಿ, ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ರೋಗಿಗಳ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಲು ನೆರವಾಗುತ್ತದೆ.” ಎಂದರು.
ಈ ಉಪಕ್ರಮದ ಮೂಲಕ ಮಣಿಪಾಲ್ ಆಸ್ಪತ್ರೆಗಳು ಬೆಂಗಳೂರಿನ ತುರ್ತು ವೈದ್ಯಕೀಯ ಪ್ರತಿಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುವತ್ತ ಹೆಜ್ಜೆ ಇಟ್ಟಿದ್ದು, ಅಗತ್ಯವಿರುವ ಸಮಯದಲ್ಲಿ ತಜ್ಞ ವೈದ್ಯಕೀಯ ನೆರವು ಸಂಚಾರ ದಟ್ಟಣೆಯಲ್ಲಿ ಸಿಲುಕದೆ ರೋಗಿಯನ್ನು ತಲುಪುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದರು.
Manipal Hospitals : ಸವಾಲಿಗೆ ಪರಿಹಾರ
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಂದು ನಿಮಿಷವೂ ನಿರ್ಣಾಯಕ. ಆದರೆ ಬೆಂಗಳೂರಿನ ಭಾರೀ ಸಂಚಾರ ದಟ್ಟಣೆ ಮತ್ತು ಕಿರಿದಾದ ರಸ್ತೆಗಳಲ್ಲಿ ಸಾಂಪ್ರದಾಯಿಕ ಆಂಬ್ಯುಲೆನ್ಸ್ಗಳು ಘಟನಾ ಸ್ಥಳವನ್ನು ತಲುಪಲು ವಿಳಂಬವಾಗುವ ಸಾಧ್ಯತೆಯಿದೆ. ಈ ಸವಾಲಿಗೆ ಪರಿಹಾರವಾಗಿ ಮಣಿಪಾಲ್ ಹಾಸ್ಪಿಟಲ್ಸ್ ಬೈಕ್ ತುರ್ತು ಪ್ರಥಮ ಪ್ರತಿಸ್ಪಂದಕರ ಸೇವೆಯನ್ನು ಪರಿಚಯಿಸಿವೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್; ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಸಿ. ಮಲ್ಲಿಕಾರ್ಜುನ ಮತ್ತು ಜ್ಞಾನೇಂದ್ರ ಕುಮಾರ್; ಹಾಗೂ ಮಣಿಪಾಲ್ ಹಾಸ್ಪಿಟಲ್ಸ್ ಚೇರ್ಮನ್ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಅವರು ಈ ಉಪಕ್ರಮಕ್ಕೆ ಚಾಲನೆ ನೀಡಿದರು.
ಆರೋಗ್ಯ ಸಚಿವರು ‘ಫಸ್ಟ್ ರೆಸ್ಪಾಂಡರ್ ಬೈಕ್ ಆಂಬ್ಯುಲೆನ್ಸ್’ಗಳಿಗೆ (ಪ್ರಥಮ ಸ್ಪಂದನಾ ಬೈಕ್ ಆಂಬ್ಯುಲೆನ್ಸ್ಗಳು) ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಈ ಸೇವೆಯನ್ನು ಪ್ರಾರಂಭಿಸಿದರು.
Also Read>> 11 ದಿನ MEMU ರೈಲು ಸಂಚಾರದಲ್ಲಿ ಬದಲಾವಣೆ, 3 ರೈಲುಗಳು 45 ನಿಮಿಷ ನಿಯಂತ್ರಣ
ಈ ಸೇವೆಯ ಮೂಲಕ ಸಾಂಪ್ರದಾಯಿಕ ಆಂಬ್ಯುಲೆನ್ಸ್ಗಳಿಗೆ ತ್ವರಿತವಾಗಿ ತಲುಪಲು ಕಷ್ಟವಾಗುವ ಕಿರಿದಾದ ರಸ್ತೆಗಳು ಹಾಗೂ ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ, ತರಬೇತಿ ಪಡೆದ ಪ್ರಥಮ ಪ್ರತಿಸ್ಪಂದಕರು ವೇಗವಾಗಿ ತೆರಳಿ, ಅಗತ್ಯವಿರುವ ತುರ್ತು ವೈದ್ಯಕೀಯ ನೆರವನ್ನು ಸ್ಥಳದಲ್ಲಿಯೇ ಆರಂಭಿಸಲಿದ್ದಾರೆ.
ಎಲ್ಲೆಲ್ಲಿ ಬೈಕ್ ಆಂಬ್ಯುಲೆನ್ಸ್ ಸೇವೆ ಲಭ್ಯ?
ಬೆಂಗಳೂರಿನ ಹೆಚ್ಚಿನ ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ಈ ಬೈಕ್ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ, ದೊಮ್ಮಲೂರು, ಹಲಸೂರು, ಹೆಬ್ಬಾಳ, ಆರ್.ಟಿ. ನಗರ, ನಾಗವಾರ, ವೈಟ್ಫೀಲ್ಡ್, ವರ್ತೂರು, ಮಾರತಹಳ್ಳಿ, ಸರ್ಜಾಪುರ ರಸ್ತೆ, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಸಂತನಗರ, ಯಲಹಂಕ ಮತ್ತು ಹೆಣ್ಣೂರು ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಇವು ತ್ವರಿತ ಪ್ರತಿಕ್ರಿಯೆ ನೀಡಲು ಸಜ್ಜಾಗಿವೆ.
Bike Ambulance : ಏನೆಲ್ಲಾ ತುರ್ತು ಸೌಲಭ್ಯ ಲಭ್ಯ?
ಜೀವ ಉಳಿಸುವ ವೈದ್ಯಕೀಯ ಉಪಕರಣಗಳೊಂದಿಗೆ ಸಜ್ಜಿತ ತುರ್ತು ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ನೆರವು ನೀಡಲು ಈ ಬೈಕ್ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ಗಳು, ಪೋರ್ಟಬಲ್ ಆಮ್ಲಜನಕ ಸಿಲಿಂಡರ್ಗಳು, ಆಘಾತ ನಿರ್ವಹಣಾ ಸಾಮಗ್ರಿಗಳು, ಪೋರ್ಟಬಲ್ ಇಸಿಜಿ ಮತ್ತು ಆಟೋಮೇಟೆಡ್ ಎಕ್ಸ್ಟರ್ನಲ್ ಡಿಫಿಬ್ರಿಲೇಟರ್ (AED) ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ.
ಬೈಕ್ನ ಹಿಂಭಾಗದಲ್ಲಿ ಕಾಂಪ್ಯಾಕ್ಟ್ ವೈದ್ಯಕೀಯ ಶೇಖರಣಾ ವಿಭಾಗವಿದ್ದು, ಆಮ್ಲಜನಕ ಸಿಲಿಂಡರ್ಗಳು ಮತ್ತು ಅಗ್ನಿಶಾಮಕ ಸಾಧನಗಳನ್ನು ಸುರಕ್ಷಿತವಾಗಿ ಅಳವಡಿಸಲಾಗಿದೆ. ಮುಂಭಾಗದಲ್ಲಿರುವ ಸೈರನ್ ಮತ್ತು ಬೀಕನ್ ದೀಪಗಳು ತುರ್ತು ಸಂದರ್ಭಗಳಲ್ಲಿ ಸಂಚಾರದ ನಡುವೆ ವೇಗವಾಗಿ ಸಾಗಲು ನೆರವಾಗುತ್ತವೆ.
ಪ್ರಥಮ ಪ್ರತಿಸ್ಪಂದಕರ ಸುರಕ್ಷತೆಗೂ ವಿಶೇಷ ಗಮನ ನೀಡಲಾಗಿದೆ. ಬೈಕ್ ಚಾಲಕ ಮತ್ತು ಹಿಂಬದಿ ಸವಾರರಿಗೆ ಅಂತರ್ನಿರ್ಮಿತ ಮೈಕ್ರೊಫೋನ್ ಹೊಂದಿರುವ ವಿಶೇಷ ಸುರಕ್ಷತಾ ಹೆಲ್ಮೆಟ್ಗಳನ್ನು ಒದಗಿಸಲಾಗಿದ್ದು, ರೋಗಿಗಳು, ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಇದು ಸಹಾಯ ಮಾಡುತ್ತದೆ. ಹಿಂಬದಿ ಸವಾರರು ಪ್ರತಿಫಲಿತ ತುರ್ತು ಬ್ಯಾಗ್ಗಳನ್ನು ಬಳಸುವುದರಿಂದ ರಾತ್ರಿ ವೇಳೆಯಲ್ಲೂ ಉತ್ತಮ ಗೋಚರತೆ ಮತ್ತು ಸುರಕ್ಷತೆ ಸಾಧ್ಯವಾಗಲಿದೆ.
ಕರೆ ಬಂದ ತಕ್ಷಣ ಸಮನ್ವಯದೊಂದಿಗೆ ಕಾರ್ಯಾಚರಣೆ 080-22221111 ಸಹಾಯವಾಣಿಗೆ ತುರ್ತು ಕರೆ ಬಂದಾಗ, ತುರ್ತು ಚಿಕಿತ್ಸಾ ವಿಭಾಗದ ವೈದ್ಯರು ಮತ್ತು ಕಮಾಂಡ್ ಸೆಂಟರ್ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಶೀಲಿಸುತ್ತಾರೆ. ಅಗತ್ಯವಿದ್ದಲ್ಲಿ, ಸಾಮಾನ್ಯ ಆಂಬ್ಯುಲೆನ್ಸ್ನೊಂದಿಗೆ ಸಮೀಪದಲ್ಲಿರುವ ಬೈಕ್ ಪ್ರಥಮ ಪ್ರತಿಸ್ಪಂದಕರನ್ನೂ ಘಟನಾ ಸ್ಥಳಕ್ಕೆ ಕಳುಹಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








