ಕಲ್ಪ ಮೀಡಿಯಾ ಹೌಸ್ | ಸೊರಬ | ವರದಿ: ಮಧುರಾಮ್ |
Soraba ತಾಲೂಕಿನ ಚಂದ್ರಗುತ್ತಿಯಲ್ಲಿ ರಾಘವಿ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ (Mega Job Fair) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 17ಕ್ಕೂ ಹೆಚ್ಚು ಕಂಪನಿಗಳು ಹಾಗೂ 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಚಂದ್ರಗುತ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉದ್ಯೋಗ ಮೇಳವನ್ನು ಮಾಜಿ ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು. ರಾಘವಿ ಚಾರಿಟೇಬಲ್ ಸೇವಾ ಟ್ರಸ್ಟ್‌ನ ರಾಘವೇಂದ್ರ ಸುಂಟ್ರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಡಾ. ಜ್ಞಾನೇಶ್ ಎಚ್. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಮೇಳ ಉದ್ಘಾಟಿಸಿ ಮಾತನಾಡಿದ ಹರತಾಳು ಹಾಲಪ್ಪ, ಇಂದಿನ ಜನ್-ಜಿ ಪೀಳಿಗೆಯ ಯುವಜನರು ಉದ್ಯೋಗದ ಹುಡುಕಾಟದಲ್ಲಿ ತಾಳ್ಮೆಯಿಂದ ಇರಬೇಕು. ಉದ್ಯೋಗ ಪಡೆಯಲು ನಿರಂತರ ಪ್ರಯತ್ನ, ಕೌಶಲ್ಯ ಹಾಗೂ ಅನುಭವ ಮುಖ್ಯ. ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ALSO READ>> Special Express Train Between Bengaluru Cantonment and Madgaon
ಡಾ. ಜ್ಞಾನೇಶ್ ಎಚ್. ಮಾತನಾಡಿ, ಕಷ್ಟಪಡದೆ ಜೀವನದಲ್ಲಿ ಸುಖವನ್ನು ಬಯಸಿದರೆ ಯಶಸ್ಸು ಸಿಗುವುದಿಲ್ಲ. ಯುವಜನರಲ್ಲಿ ಮಾಡುವ ಛಲ, ಹಠ ಹಾಗೂ ಕಲಿಯುವ ಮನೋಭಾವ ಇರಬೇಕು. ವಿದ್ಯಾಭ್ಯಾಸದ ಜತೆಗೆ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರಕ್ಕೆ ಅನುಗುಣವಾಗಿ ಹೊಸ ಕೌಶಲ್ಯಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಸುಂಟ್ರಳ್ಳಿ ಮಾತನಾಡಿ, ತಾವು ಗ್ರಾಮೀಣ ಹಿನ್ನೆಲೆಯ ಮನೆಯಿಂದ ಹೊರಬಂದು ಅವಕಾಶಗಳನ್ನು ಹುಡುಕಿಕೊಂಡು ಮುನ್ನಡೆದಿದ್ದರಿಂದ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ತಾವು ಪಡೆದ ಅವಕಾಶಗಳು ಗ್ರಾಮೀಣ ಭಾಗದ ಯುವಜನರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಉದ್ಯೋಗ ಕ್ಷೇತ್ರದಲ್ಲಿ ಗಂಡು–ಹೆಣ್ಣು ಎಂಬ ಯಾವುದೇ ಗಡಿ ಇಲ್ಲ. ಅರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲರಿಗೂ ಸಮಾನ ಅವಕಾಶವಿದೆ. ಗ್ರಾಮೀಣ ಭಾಗದ ಯುವಜನರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
Chandragutti | 500 ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಭಾಗಿ
ಮೇಳದಲ್ಲಿ 17ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ನೇರ ಸಂದರ್ಶನ ನಡೆಸಿದರು. 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡರು.
ಮೇಳವನ್ನು
ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕುಮಾರ ಉಪ್ಪಾರ ಅವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪ್ರಮಾಣಪತ್ರ ನೀಡಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ಚಂದ್ರಗುತ್ತಿ ಸೇರಿದಂತೆ ಸೊರಬ ತಾಲೂಕಿನ ಗ್ರಾಮೀಣ ಭಾಗದ ಯುವಜನರಿಗೆ ಒಂದೇ ವೇದಿಕೆಯಲ್ಲಿ ಹಲವು ಕಂಪನಿಗಳನ್ನು ಸಂಪರ್ಕಿಸಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಿದ ಮೇಳವು ಗ್ರಾಮೀಣ ಯುವಜನರ ಪಾಲಿಗೆ ಉಪಯುಕ್ತ ವೇದಿಕೆಯಾಯಿತು.
ಕಾರ್ಯಕ್ರಮದಲ್ಲಿ ರಾಘವಿ ಚಾರಿಟೇಬಲ್ ಸೇವಾ ಟ್ರಸ್ಟ್‌ನ ಸದಸ್ಯರು, ವಿವಿಧ ಕಂಪನಿಗಳ ಪ್ರತಿನಿಧಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಚಂದ್ರಗುತ್ತಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







