ಕಲ್ಪ ಮೀಡಿಯಾ ಹೌಸ್ | ಮೈಸೂರು/ಹಾಸನ |
ಕರ್ತವ್ಯನಿರತ ಟಿಟಿಇಯ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯ ಕಾರ್ಯಾಚರಣೆಯಿಂದ ರೈಲು ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು 80 ಸಾವಿರ ಮೌಲ್ಯದ ಲ್ಯಾಪ್ಟಾಪ್ ಸೇರಿದಂತೆ ಅಮೂಲ್ಯ ವಸ್ತುಗಳು ಪತ್ತೆಯಾಗಿರುವ ಘಟನೆ ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ ನಡೆದಿದೆ.
ಹೌದು… ಕರ್ತವ್ಯ ನಿರತ ಟಿಟಿಇಯ ಆ ಒಂದು ಎಚ್ಚರಿಕೆಯ ನಡೆಯಿಂದಾಗಿ, ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಲ್ಯಾಪ್ಟಾಪ್ ಸೇರಿ ಹಲವು ಅಮೂಲ್ಯ ವಸ್ತುಗಳು ದೊರೆತಿದ್ದು, ಕಳ್ಳನನ್ನು ಬಂಧಿಸಲಾಗಿದೆ.
ಪ್ರಯಾಣಿಕರ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ರೈಲ್ವೆ ರಕ್ಷಣಾ ಪಡೆ (ಆರ್’ಪಿಎಫ್) ಕಳವು ಮಾಡಿದ್ದಾನೆ ಎನ್ನಲಾದ ವ್ಯಕ್ತಿಯನ್ನು ವಶಕ್ಕೆ ಪಡೆದು, ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದೆ.
ರೈಲು ಪ್ರಯಾಣಿಕರ ಸುರಕ್ಷತೆ ಹಾಗೂ ಅವರ ಅಮೂಲ್ಯ ವಸ್ತುಗಳ ಭದ್ರತೆಗೆ ನೈಋತ್ಯ ರೈಲ್ವೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದೇ ನಿಟ್ಟಿನಲ್ಲಿ ರೈಲ್ಮದದ್ ಮೂಲಕ ಸ್ವೀಕರಿಸಲಾದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ರೈಲಿನಲ್ಲಿ ಲ್ಯಾಪ್ಟಾಪ್ ಬ್ಯಾಗ್ ನಾಪತ್ತೆ
ದೂರುದಾರರಾದ ಅಭಿಷೇಕ್ ಅವರು ರೈಲು ಸಂಖ್ಯೆ 16585ರಲ್ಲಿ ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್’ವರೆಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಂದರ್ಭದಲ್ಲಿ ತಮ್ಮ ಬರ್ತ್ನಲ್ಲಿಟ್ಟಿದ್ದ ಲ್ಯಾಪ್ಟಾಪ್ ಬ್ಯಾಗ್ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ಕಾಣೆಯಾಗಿದ್ದ ಬ್ಯಾಗ್’ನಲ್ಲಿ ಸುಮಾರು 80,000 ಮೌಲ್ಯದ ಲೆನೊವೊ ಲ್ಯಾಪ್ಟಾಪ್, ಲ್ಯಾಪ್ಟಾಪ್ ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ವಿವಿಧ ಗುರುತಿನ ಚೀಟಿಗಳು ಇದ್ದವು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹೊಳೆನರಸೀಪುರ ಮತ್ತು ಸಕಲೇಶಪುರ ನಿಲ್ದಾಣಗಳ ನಡುವಿನ ಯಾವುದೋ ಸ್ಥಳದಲ್ಲಿ ಬ್ಯಾಗ್ ಕಾಣೆಯಾಗಿರಬಹುದು ಎಂದು ಅವರು ಶಂಕಿಸಿದ್ದರು. ಆದರೆ ಬ್ಯಾಗ್ ನಿಖರವಾಗಿ ಎಲ್ಲಿಂದ ಕಳುವಾಗಿದೆ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಿರಲಿಲ್ಲ.
SWR : ಟಿಟಿಇಗೆ ವ್ಯಕ್ತಿಯ ವರ್ತನೆ ಬಗ್ಗೆ ಅನುಮಾನ
ದೂರು ಸ್ವೀಕರಿಸಿದ ಬಳಿಕ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ತನಿಖೆ ಆರಂಭಿಸಿದರು. ಈ ವೇಳೆ ರೈಲು ಸಂಖ್ಯೆ 17302 (ಬೆಳಗಾವಿ-ಮೈಸೂರು)ರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ವರ್ತನೆ ಕರ್ತವ್ಯನಿರತ ಟಿಟಿಇ ಚಂದ್ರ ನಾಯಕ್ ಅವರ ಗಮನ ಸೆಳೆದಿದೆ.
ವ್ಯಕ್ತಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಟಿಟಿಇ ಚಂದ್ರ ನಾಯಕ್ ಅವರು ತಕ್ಷಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಆತನನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಕ್ರಮಕ್ಕಾಗಿ ಆತನನ್ನು ಕೆ.ಆರ. ನಗರದ ಆರ್’ಪಿಎಫ್ ಔಟ್ ಪೋಸ್ಟ್’ಗೆ ಹಸ್ತಾಂತರಿಸಲಾಯಿತು.
ಕಳವು ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿ
ವಿಚಾರಣೆ ವೇಳೆ ಆ ವ್ಯಕ್ತಿಯು ಹೊಳೆನರಸೀಪುರ ಮತ್ತು ಹಾಸನ ನಡುವಿನ ರೈಲು ಮಾರ್ಗದಲ್ಲಿ ರೈಲು ಸಂಖ್ಯೆ 16585ರಿಂದ ಲ್ಯಾಪ್ಟಾಪ್ ಬ್ಯಾಗ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆದ ವ್ಯಕ್ತಿಯನ್ನು ಬಸವರಾಜ ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ಹಾಗೂ ಅಗತ್ಯ ಕಾನೂನು ಕ್ರಮಕ್ಕಾಗಿ ಆತನನ್ನು ಕೆ.ಆರ್. ನಗರ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್’ಪಿ) ಠಾಣೆಯ ಪೊಲೀಸ್ ಉಪನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ.
ತನಿಖೆಯ ವೇಳೆ ಪತ್ತೆಯಾದ ಲ್ಯಾಪ್ಟಾಪ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಸೂಕ್ತ ಪರಿಶೀಲನೆ ನಡೆಸಿ, ವಾರಸುದಾರರ ಗುರುತು ಮತ್ತು ಹಕ್ಕನ್ನು ದೃಢಪಡಿಸಿದ ಬಳಿಕ ನಿಜವಾದ ವಾರಸುದಾರರಾದ ಅಭಿಷೇಕ್ ಅವರಿಗೆ ಹಸ್ತಾಂತರಿಸಲಾಗಿದೆ.
Also Read>> ರಷ್ಯಾ ಕರಾವಳಿಯಲ್ಲಿ ಟ್ಯಾಂಕರ್ ಮೇಲೆ ಮಾನವರಹಿತ ನೌಕೆ ದಾಳಿ; 23 ಭಾರತೀಯರು ಸುರಕ್ಷಿತ
ಟಿಟಿಇ ಚಂದ್ರ ನಾಯಕ್ ಕಾರ್ಯಕ್ಕೆ ನೈಋತ್ಯ ರೈಲ್ವೆ ಶ್ಲಾಘನೆ
ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಅನುಮಾನಾಸ್ಪದ ವ್ಯಕ್ತಿಯನ್ನು ಗುರುತಿಸಿ ವಸ್ತುಗಳ ಪತ್ತೆಗೆ ನೆರವಾದ ಟಿಟಿಇ ಚಂದ್ರ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ನೈಋತ್ಯ ರೈಲ್ವೆ ಶ್ಲಾಘಿಸಿದೆ.
ಪ್ರಯಾಣದ ವೇಳೆ ಪ್ರಯಾಣಿಕರು ತಮ್ಮ ಲ್ಯಾಪ್ಟಾಪ್, ಮೊಬೈಲ್, ಚಿನ್ನಾಭರಣ, ಹಣ ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಸಲಹೆ ನೀಡಿದೆ.
ಯಾವುದೇ ಪ್ರಯಾಣಿಕರಿಗೆ ವಸ್ತು ಕಳವು, ನಷ್ಟ ಅಥವಾ ಇತರೆ ಭದ್ರತಾ ಸಮಸ್ಯೆ ಎದುರಾದರೆ ಕೂಡಲೇ ರೈಲ್ ಮದದ್ 139 ಮೂಲಕ ದೂರು ದಾಖಲಿಸಬೇಕು. ಅಲ್ಲದೆ, ಸಮೀಪದ ರೈಲ್ವೆ ಸಿಬ್ಬಂದಿ ಅಥವಾ ಆರ್ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿ ಅಗತ್ಯ ನೆರವು ಪಡೆಯುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









