ಕಲ್ಪ ಮೀಡಿಯಾ ಹೌಸ್ | ಹಾಸನ |
ಹಾಸನ ತಾಯಿ ಹಾಸನಾಂಬ ದೇವಿಯ ದರ್ಶನ (Hasanamba Festival) ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಗೆ (Hassan) ಆಗಮಿಸುವ ಸಾರ್ವಜನಿಕರು ಮತ್ತು ಲಕ್ಷಾಂತರ ಭಕ್ತರಿಗೆ ಹಾಸನದ ಗ್ರಾಮೀಣ ಸೊಗಡು, ಜಾನಪದ ಕಲೆ, ಸಂಸ್ಕೃತಿ ಹಾಗೂ ಪಾರಂಪರಿಕ ಕ್ರೀಡೆಗಳನ್ನು ಪರಿಚಯಿಸುವ ಉದ್ದೇಶದಿಂದ ಹಲವು ವಿಶೇಷ ಉತ್ಸವಗಳನ್ನು ಆಯೋಜಿಸಲಾಗಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸನಾಂಬ ಕ್ರೀಡೋತ್ಸವ, ಹಾಸನಾಂಬ ಜಾನುವಾರು ಉತ್ಸವ, ಯುವಜನೋತ್ಸವ, ಎತ್ತಿನಗಾಡಿ ಓಟದ ಸಾಹಸ ಸ್ಪರ್ಧೆ, ಬೃಹತ್ ರಂಗೋಲಿ ಸ್ಪರ್ಧೆ ಹಾಗೂ ಜಾನಪದ ಉತ್ಸವಗಳ ಅಧಿಕೃತ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಮ್ಮ ನಾಡಿನ ಪ್ರಾಚೀನ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯ ಪ್ರತೀಕಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಾರ್ವಜನಿಕರಲ್ಲಿ ಸಾಂಸ್ಕೃತಿಕ ಹೆಮ್ಮೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹಾಸನ ನಗರಕ್ಕೆ ಮಾತ್ರ ಸೀಮಿತವಾಗದೆ ಜಿಲ್ಲೆಯ ಪ್ರತಿಯೊಂದು ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಈ ಉತ್ಸವಗಳ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
Hasanamba Festival :ಹಾಸನಾಂಬ ದರ್ಶನದೊಂದಿಗೆ ಬೃಹತ್ ರಂಗೋಲಿ ಸ್ಪರ್ಧೆ
ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭಕಾರ್ಯ ಅಥವಾ ಮಂಗಳಕರ ಕಾರ್ಯಕ್ರಮ ಆರಂಭಿಸುವ ಸಂದರ್ಭದಲ್ಲಿ ರಂಗೋಲಿ ಹಾಕಿ ಸ್ವಾಗತಿಸುವ ಸಂಪ್ರದಾಯವಿದೆ. ಇದೇ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆದು ತಾಯಿಯ ದರ್ಶನ ಆರಂಭವಾಗುವ ಮೊದಲ ದಿನದಿಂದಲೇ ಬೃಹತ್ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದು. ಅತ್ಯುತ್ತಮ ರಂಗೋಲಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ದೇಸಿ ಹಳ್ಳಿಕಾರ್ ರಾಸುಗಳ ಪ್ರದರ್ಶನ
ಹಾಸನ ಜಿಲ್ಲೆಯ ರೈತರು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿರುವ ಶ್ರೇಷ್ಠ ದೇಸಿ ಹಳ್ಳಿಕಾರ್ ರಾಸುಗಳು ಹಾಗೂ ಜೋಡೆತ್ತುಗಳ ಪ್ರದರ್ಶನ ಕೂಡ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.
ಹಿಂದೆ ಜನವರಿಯಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ಸಾವಿರಾರು ಜೋಡೆತ್ತುಗಳ ಗತ್ತು-ಗಾಂಭೀರ್ಯವನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆ ಹಳೆಯ ಪರಂಪರೆಯನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ರೈತರಿಗೆ ತಮ್ಮ ಉತ್ತಮ ತಳಿಯ ರಾಸುಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಜಾತ್ರೆಯ ಅವಧಿಯಲ್ಲಿ ಪ್ರತಿನಿತ್ಯ ಜಾನುವಾರುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅತ್ಯುತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಇದರೊಂದಿಗೆ ವಿವಿಧ ಸಾಕುಪ್ರಾಣಿಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕಣ್ಮನ ಸೆಳೆಯಲಿದೆ ಎತ್ತಿನಗಾಡಿ ಓಟ
ಗ್ರಾಮೀಣ ಭಾಗಗಳಲ್ಲಿ, ಅದರಲ್ಲೂ ಬಾಣಾವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಎತ್ತಿನಗಾಡಿ ಓಟದ ಸಾಹಸ ಸ್ಪರ್ಧೆಯನ್ನು ಈ ಬಾರಿಯ ಹಾಸನಾಂಬ ಜಾತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿದೆ.
Also Read>> ಕ್ರೀಡಾಕೂಟದಲ್ಲಿ ಕ್ರೈಸ್ಟ್ಕಿಂಗ್ ವಿದ್ಯಾರ್ಥಿಗಳ ಸಾಧನೆ: ಅಂಕುಶ್ಗೆ ಚಿನ್ನ, ಲಕ್ಷಣ್ಯಗೆ ಬೆಳ್ಳಿ
ಎತ್ತಿನಗಾಡಿ ಓಟವು ಗ್ರಾಮೀಣ ಜನಜೀವನದೊಂದಿಗೆ ಬೆಸೆದುಕೊಂಡಿರುವ ಪಾರಂಪರಿಕ ಸಾಹಸ ಕ್ರೀಡೆಯಾಗಿದ್ದು, ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಇದು ವಿಶೇಷ ಅನುಭವ ನೀಡಲಿದೆ. ಗ್ರಾಮೀಣ ಕ್ರೀಡೆ ಹಾಗೂ ಜಾನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿಯೂ ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ಹೇಳಿದರು.
‘ಹಾಸನಾಂಬ ಕಪ್’ ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ‘ಹಾಸನಾಂಬ ಕಪ್’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು, ಇದರೊಂದಿಗೆ ಮಣ್ಣಿನ ಸೊಗಡಿನ ಕಬಡ್ಡಿ ಪಂದ್ಯಾವಳಿ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









