ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (Bengaluru) ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ‘ನವರಾತ್ರ ನಮಸ್ಯಾ’ (Navaratri Namasya) ಮಹೋತ್ಸವ ನಡೆಯಲಿದೆ.
‘ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಮಹೋತ್ಸವದಲ್ಲಿ ವ್ರತ, ಜಪ, ಪಾರಾಯಣ, ಯಜ್ಞ, ದಾನ ಹಾಗೂ ಜ್ಞಾನ ಪ್ರಸಾರದ ಮೂಲಕ ಜಗನ್ಮಾತೆಯ ಆರಾಧನೆ ವೈಭವದಿಂದ ನಡೆಯಲಿದೆ. ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜರಾಜೇಶ್ವರಿಯ ಉಪಾಸನೆಗೆ ವಿಶೇಷ ಮಹತ್ವ ನೀಡಲಾಗಿದೆ.
ಒಂಬತ್ತು ದಿನ ರಾಜರಾಜೇಶ್ವರಿಗೆ ವಿಶೇಷ ಪೂಜೆ
ನವರಾತ್ರಿ ಪರ್ವದ ಒಂಬತ್ತು ದಿನಗಳ ಕಾಲ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಉಪವಾಸ ವ್ರತ ಆಚರಿಸಿ ರಾಜರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ಶ್ರೀಗಳಿಂದ ಪ್ರತಿದಿನ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ.
ವಿಶೇಷವಾಗಿ ಶ್ರೀದುರ್ಗಾ ಮಂಟಪದಲ್ಲಿ ಮೃಣ್ಮಯ ಶ್ರೀರಾಜರಾಜೇಶ್ವರಿಯ ಮಹಾಪೂಜೆ ನಡೆಯಲಿದ್ದು, ವಿಶೇಷ ಉಪಾಸನೆಯ ಅಂಗವಾಗಿ ಪ್ರತಿದಿನ ನೂರರಂತೆ ಒಟ್ಟು 1000 ಸಪ್ತಶತೀ ಪಾರಾಯಣ ನಡೆಯಲಿದೆ.
ಒಂಬತ್ತು ದಿನ ಒಂಬತ್ತು ವಿಶೇಷ ಹವನ
ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ಒಂಬತ್ತು ವಿಶೇಷ ಹವನಗಳನ್ನು ಆಯೋಜಿಸಲಾಗಿದೆ. ವಿಜಯದಶಮಿಯಂದು ಶತಚಂಡಿಕಾ ಮಹಾಯಾಗ ಸಂಪನ್ನವಾಗಲಿದೆ.
ಪ್ರತಿದಿನ ಅನ್ನಪೂರ್ಣೇಶ್ವರೀ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಸಂಜೆ ದುರ್ಗಾದೀಪ ನಮಸ್ಕಾರ, ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಉಡಿಸೇವೆ ನಡೆಯಲಿದೆ. ಭಜನಾ ತಂಡಗಳಿಂದ ಭಜನೆಗಳು ಹಾಗೂ ವಿವಿಧ ಕಲೋಪಾಸನಾ ಕಾರ್ಯಕ್ರಮಗಳ ಮೂಲಕ ದೇವಿಯ ಆರಾಧನೆ ನಡೆಯಲಿದೆ.
ಭೋಜನದೊಂದಿಗೆ ಭಕ್ತಿ ರಸದ ಸಿಹಿ
ಶ್ರೀಗಳವರು ಚಾತುರ್ಮಾಸ್ಯದ ‘ಅನ್ನಂ ಬ್ರಹ್ಮ’ ಪ್ರವಚನದಲ್ಲಿ ಸೂಚಿಸಿದಂತೆ ಭೋಜನವೂ ಭಗವಂತನ ಪೂಜೆಯಾಗಿದೆ. ಭೋಜನದ ಸಮಯದಲ್ಲಿ ಭಗವಂತನ ಸ್ಮರಣೆಗೆ ಅನುಕೂಲವಾಗುವಂತೆ ‘ಅನ್ನಬ್ರಹ್ಮ ಸಂಕೀರ್ತನಮ್’ ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಮೂಲಕ ಭೋಜನದ ಜೊತೆಗೆ ಭಕ್ತಿರಸದ ಸವಿಯನ್ನೂ ಉಣಬಡಿಸುವ ಉದ್ದೇಶ ಹೊಂದಲಾಗಿದೆ.
ಅ.21ರಂದು ಮಹಾಸಮಾರೋಪ
ಅಕ್ಟೋಬರ್ 21ರಂದು ಬುಧವಾರ ವಿದ್ಯಾದಶಮಿಯಂದು ‘ನವರಾತ್ರ ನಮಸ್ಯಾ’ ಮಹೋತ್ಸವದ ಮಹಾಸಮಾರೋಪ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ.
Also Read>> ಬೆಂಗಳೂರು | ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವ
ನವರಾತ್ರಿ ಪರ್ವಕಾಲದಲ್ಲಿ ವಿವಿಧ ಆಯಾಮಗಳಲ್ಲಿ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದ್ದು, ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ನವರಾತ್ರ ನಮಸ್ಯಾ ಸಮಿತಿಯು ಕರೆ ನೀಡಿದೆ.
Bengaluru: ನವರಾತ್ರ ನಮಸ್ಯಾ ಕಾರ್ಯಾಲಯ ಉದ್ಘಾಟನೆ
ಇದೇ ಸಂದರ್ಭದಲ್ಲಿ ನವರಾತ್ರ ನಮಸ್ಯಾ ಮಹೋತ್ಸವದ ಕಾರ್ಯಾಲಯವನ್ನು ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನವರಾತ್ರಿ ಪರ್ವದಲ್ಲಿ ದೇವಿಯ ಆರಾಧನೆಯ ಇಂತಹ ವಿಶೇಷ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವಿದ್ದು, ಬೆಂಗಳೂರಿನ ಮಹಾಜನತೆ ಈ ಅಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









