ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) |
ಸೊರಬ(Soraba) ತಾಲೂಕಿನ ಉಳವಿ ಹೋಬಳಿಯ ಚೀಲನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಬಿರುಸಿನ ಗಾಳಿ ಮಳೆಯಾಗಿದ್ದು, ಹಲವು ಕಡೆ ಹಾನಿ ಸಂಭವಿಸಿದೆ. ಬಿರುಗಾಳಿಯ ಅಬ್ಬರಕ್ಕೆ ಬೃಹತ್ ಮರವೊಂದು ವಿದ್ಯುತ್ ಲೈನ್ (Power Line) ಮೇಲೆ ಉರುಳಿ ಬಿದ್ದು ಮೂರು ವಿದ್ಯುತ್ ಕಂಬಗಳು ಧರೆಗುರುಳಿವೆ. ಗ್ರಾಮದ ಮನೆಯೊಂದರ ಮೇಲ್ಛಾವಣಿಯೂ ಸಂಪೂರ್ಣ ಹಾನಿಗೀಡಾಗಿದೆ.
Soraba: ವಿದ್ಯುತ್ ಲೈನ್ ಮೇಲೆ ಉರುಳಿದ ಬೃಹತ್ ಮರ
ಸೊರಬ-ಹೊಸಬಾಳೆ ಮುಖ್ಯರಸ್ತೆಯಿಂದ ಚೀಲನೂರಿಗೆ ತೆರಳುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿರುಗಾಳಿಗೆ ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಮೂರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಿಗೆ ತೊಂದರೆ ಉಂಟಾಯಿತು.
ಗಾಳಿಗೆ ಹಾರಿಹೋದ ಮನೆಯ ಮೇಲ್ಛಾವಣಿ
ಚೀಲನೂರು ಗ್ರಾಮದ ಪ್ರಭಾಕರ ಎಂಬುವವರು ತಮ್ಮ ತೋಟದಲ್ಲಿ ನಿರ್ಮಿಸಿಕೊಂಡಿದ್ದ ಮನೆಯ ಮೇಲ್ಛಾವಣಿ ಬಿರುಗಾಳಿಯ ರಭಸಕ್ಕೆ ಸಂಪೂರ್ಣವಾಗಿ ಹಾರಿಹೋಗಿದೆ. ಏಕಾಏಕಿ ಬೀಸಿದ ಬಿರುಗಾಳಿ ಹಾಗೂ ಮಳೆಯಿಂದಾಗಿ ಸ್ಥಳೀಯರು ಆತಂಕಕ್ಕೊಳಗಾದರು.
Also Read>> ಮಹಿಳಾ ಸಬಲೀಕರಣಕ್ಕೆ ‘ವೋಕಲ್ ಫಾರ್ ಲೋಕಲ್’, ಒಡಿಒಪಿ ಬಳಕೆಗೆ ಮೋದಿ ಕರೆ
ವಿದ್ಯುತ್ ಸಂಪರ್ಕ ಕಡಿತ: ಗ್ರಾಮಸ್ಥರಲ್ಲಿ ಆತಂಕ
ವಿದ್ಯುತ್ ಕಂಬಗಳು ಧರೆಗುರುಳಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರಿಂದ ಗ್ರಾಮಸ್ಥರು ಭಯ ಹಾಗೂ ಆತಂಕದಲ್ಲಿಯೇ ಕಾಲ ಕಳೆಯುವಂತಾಯಿತು. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೆಸ್ಕಾಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










