ಕಲ್ಪ ಮೀಡಿಯಾ ಹೌಸ್ | ಚೆನ್ನೈ (ತಮಿಳುನಾಡು) |
ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು ಬೆಳಗ್ಗೆ ಚೆನ್ನೈಗೆ ಆಗಮಿಸಿ, ಸುಮಾರು ₹13 ಸಾವಿರ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಚೆನ್ನೈಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ತಮಿಳುನಾಡು (Tamilunadu) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, (CM Vijay) ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಯುವ ಪೊರೂರು ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ರೋಡ್‌ಶೋ ನಡೆಸಿದರು. ಬಳಿಕ ಪೊರೂರಿನಲ್ಲಿ ಪೊರೂರು–ಪೂನಮಲ್ಲಿ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
14.5 ಕಿ.ಮೀ ಉದ್ದದ ಮೆಟ್ರೋ ಮಾರ್ಗ
ಪೊರೂರು–ಪೂನಮಲ್ಲಿ ಮೆಟ್ರೋ ಮಾರ್ಗವು 14.5 ಕಿ.ಮೀ ಉದ್ದವಿದ್ದು, ಇದರಲ್ಲಿ 3.7 ಕಿ.ಮೀ ಉದ್ದದ ವಿಶಿಷ್ಟ ಡಬಲ್ ಡೆಕ್ಕರ್ ರಚನೆಯೂ ಇದೆ. ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಭವಿಷ್ಯದಲ್ಲಿ ಚಾಲಕರಹಿತ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ.
₹750 ಕೋಟಿಗೂ ಅಧಿಕ ರೈಲ್ವೆ ಯೋಜನೆಗಳು
ಪ್ರಧಾನಿ ಮೋದಿ ಅವರು ₹750 ಕೋಟಿಗೂ ಅಧಿಕ ಮೌಲ್ಯದ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪುನರ್ ಅಭಿವೃದ್ಧಿಪಡಿಸಲಾದ ಪಳಣಿ, ವೆಲ್ಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕುಡಿ ಮತ್ತು ನಮಕ್ಕಲ್ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
PM Modi: ಐಐಟಿ ಮದ್ರಾಸ್‌ನಲ್ಲಿ ಮೆದುಳು ಸಂಶೋಧನಾ ಕೇಂದ್ರ
ಬಳಿಕ ಪ್ರಧಾನಿ ಮೋದಿ ಅವರು ಐಐಟಿ ಮದ್ರಾಸ್ ಆವರಣಕ್ಕೆ ತೆರಳಿ ಜಲಕಂಠೇಶ್ವರ ಶಿವ ದೇವಾಲಯದಲ್ಲಿ ದರ್ಶನ ಹಾಗೂ ಪೂಜೆ ಸಲ್ಲಿಸಲಿದ್ದಾರೆ. ನಂತರ ಐಐಟಿ ಮದ್ರಾಸ್‌ನ ಸುಧಾ ಗೋಪಾಲಕೃಷ್ಣನ್ ಬ್ರೇನ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
Also Read>> ಮೈಸೂರು ದಸರಾ ಸಂಭ್ರಮಕ್ಕೆ ಚಾಲನೆ; ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ!
ಮಾನವ ಮೆದುಳಿನ 100ಕ್ಕೂ ಅಧಿಕ ಮಾದರಿಗಳನ್ನು ಮೂರು ಆಯಾಮದ ಅಟ್ಲಸ್‌ಗಳಾಗಿ, ಜೀವಕೋಶ ಮಟ್ಟದ ವಿವರಗಳೊಂದಿಗೆ ದಾಖಲಿಸುವ ಮಹತ್ವಾಕಾಂಕ್ಷೆಯ ವೈಜ್ಞಾನಿಕ ಯೋಜನೆಯಾಗಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಭ್ರೂಣಾವಸ್ಥೆಯಿಂದ ವೃದ್ಧಾಪ್ಯದವರೆಗಿನ ಮಾನವ ಮೆದುಳಿನ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ನೆರವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ
ಸಮುದ್ರ ಆಧಾರಿತ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಲಿದ್ದಾರೆ. ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.
ಈ ಯೋಜನೆಗಳಿಂದ ಸೇಲಂ, ಮಧುರೈ ಹಾಗೂ ನಾಗಪಟ್ಟಣಂ ನಗರಗಳಲ್ಲಿ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ಸಂಚಾರ ದಟ್ಟಣೆಯೂ ಇಳಿಕೆಯಾಗುವ ನಿರೀಕ್ಷೆಯಿದೆ.
ಜೈಗೋಪಾಲ್ ಗರೋಡಿಯ ಹಿಂದೂ ವಿದ್ಯಾಲಯದ ಸುವರ್ಣ ಮಹೋತ್ಸವ
ಚೆನ್ನೈ ಪ್ರವಾಸದ ಅಂತ್ಯದಲ್ಲಿ ಪ್ರಧಾನಿ ಮೋದಿ ಅವರು ಜೈಗೋಪಾಲ್ ಗರೋಡಿಯ ಹಿಂದೂ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ದೆಹಲಿಗೆ ವಾಪಸಾಗಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













