ಕಲ್ಪ ಮೀಡಿಯಾ ಹೌಸ್ | ಉಳ್ಳಾಲ (ಚಿಕ್ಕಮಗಳೂರು) |
ಉಳ್ಳಾಲ ಸೋಮೇಶ್ವರದ ಪೆರಿಬೈಲ್ ಬೀಚ್ನಲ್ಲಿ (Ullal Peribail Beach) ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಉಜಿರೆ ಎಸ್ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಪೆರಿಬೈಲ್ ಬೀಚ್ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
Ullal Peribail Beach: ಸ್ನೇಹಿತರೊಂದಿಗೆ ಬೀಚ್ಗೆ ತೆರಳಿದ್ದ ವಿದ್ಯಾರ್ಥಿ
ಉಜಿರೆ ಎಸ್ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದು ನೀರಾಟವಾಡುತ್ತಿದ್ದರು.
ಆ ಸಂದರ್ಭದಲ್ಲಿ ಏಕಾಏಕಿ ಅಪ್ಪಳಿಸಿದ ಅಲೆಗಳ ರಭಸಕ್ಕೆ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಶೋಭಿತ್ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.
ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ
ವಿದ್ಯಾರ್ಥಿ ನಾಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಶನಿವಾರ ತಡರಾತ್ರಿವರೆಗೂ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್ಡಿಆರ್ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ರಾತ್ರಿ ವೇಳೆ ಶೋಭಿತ್ ಪತ್ತೆಯಾಗಿರಲಿಲ್ಲ.
ನಾಡದೋಣಿಯಲ್ಲಿ ಹುಡುಕಾಟ; ಮೃತದೇಹ ಪತ್ತೆ
ಭಾನುವಾರವೂ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಉಳ್ಳಾಲ ವಲಯ ನಾಡದೋಣಿ ಹಾಗೂ ಗಿಲೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಹಾಗೂ ಇರ್ಫಾನ್ ಕೋಟೆಪುರ ನಾಡದೋಣಿಯಲ್ಲಿ ಸಮುದ್ರದಲ್ಲಿ ಹುಡುಕಾಟ ನಡೆಸಿದರು.
Also Read>> ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ; ಚಾಮುಂಡೇಶ್ವರಿ ದೇವಿಯ ಮೆರವಣಿಗೆಗೆ ಮೆರುಗು
ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಯಿತು.
ಮರಣೋತ್ತರ ಪರೀಕ್ಷೆಗೆ ರವಾನೆ
ಮೃತದೇಹವನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














