ಕಲ್ಪ ಮೀಡಿಯಾ ಹೌಸ್ | ಸೊರಬ |
ಜಿಲ್ಲೆಯ ಹಿರಿಯ ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ಅವರ ನಿಧನಕ್ಕೆ ಸೊರಬ (Soraba) ಪಟ್ಟಣದಲ್ಲಿ ಸಂತಾಪ ಸಭೆ (Condolence Meeting) ನಡೆಸಿ ಗೌರವ ನಮನ ಸಲ್ಲಿಸಲಾಯಿತು.
ಪಟ್ಟಣದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಕಚೇರಿಯಲ್ಲಿ ಪ್ರೆಸ್ ಕ್ಲಬ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಸಂತಾಪ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡ ಗಣ್ಯರು, ಪತ್ರಕರ್ತರು ಹಾಗೂ ಸಾರ್ವಜನಿಕರು ಭಂಡಿಗಡಿ ನಂಜುಂಡಪ್ಪ ಅವರ ಪತ್ರಿಕೋದ್ಯಮ ಕ್ಷೇತ್ರದ ಸೇವೆ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿ, ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಸಂತಾಪ ಸಭೆಯಲ್ಲಿ ಮಾತನಾಡಿದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಭಂಡಿಗಡಿ ನಂಜುಂಡಪ್ಪ ಅವರು ಹಲವು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮದೇ ಆದ ಛಾಪು ಮೂಡಿಸಿದ್ದರು. ಪತ್ರಿಕಾ ಸಂಪಾದಕರಾಗಿ ಕಾರ್ಯನಿರ್ವಹಿಸುವುದರ ಜತೆಗೆ ಪತ್ರಕರ್ತರ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು ಎಂದು ಹೇಳಿದರು.
Soraba | ಪತ್ರಿಕೋದ್ಯಮದ ಬೆಳವಣಿಗೆಗೆ ಕೊಡುಗೆ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಯಾಗಿ, ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಮತ್ತು ಸಂಪಾದಕರ ಸಂಘದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಗಮನಾರ್ಹವಾದುದು. ಪತ್ರಿಕೋದ್ಯಮದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ವೃತ್ತಿಯ ಗೌರವ ಮತ್ತು ಮೌಲ್ಯಗಳನ್ನು ಎತ್ತಿಹಿಡಿದಿದ್ದರು ಎಂದು ಸ್ಮರಿಸಿದರು.
Also Read>> ಕುಂದಾಪುರದಲ್ಲಿ ಕಾರು–ಸ್ಕೂಟರ್ ಭೀಕರ ಅಪಘಾತ: ಸ್ಕೂಟರ್ ಸವಾರ ಸಾವು
ಭಂಡಿಗಡಿ ನಂಜುಂಡಪ್ಪ ಅವರು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಅಜಾತಶತ್ರುವಾಗಿದ್ದರು. ಸದಾ ಚಟುವಟಿಕೆಯಿಂದ ಇರುತ್ತಿದ್ದ ಅವರು, ಪತ್ರಿಕೋದ್ಯಮದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದರು. ಅವರ ಅನುಭವ, ವೃತ್ತಿಪರತೆ ಹಾಗೂ ಕಾರ್ಯಶೈಲಿ ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿತ್ತು. ಅವರ ನಿಧನದಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕೆ. ಪ್ರಭಾಕರ ರಾಯ್ಕರ್ ವಿಷಾದ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ, ಉಪಾಧ್ಯಕ್ಷ ದತ್ತಾ ಸೊರಬ, ಹಿರಿಯರಾದ ಟೈಮ್ಸ್ ರಾಜಣ್ಣ, ಆಕಾಶವಾಣಿ ಕಲಾವಿದ ಗುರುಮೂರ್ತಿ, ರಾಜೇಂದ್ರ ಜೈನ್, ಜಿ. ಕೆರಿಯಪ್ಪ, ಮಧುರಾಮ್, ಯುವರಾಜ ಜೈನ್, ಶರತ್ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದು, ಅಗಲಿದ ಹಿರಿಯ ಪತ್ರಕರ್ತರಿಗೆ ಗೌರವ ನಮನ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












