ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶಿವಮೊಗ್ಗದಲ್ಲಿ (Shivamogga) ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳ (Railway Project) ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆ ವಿಸ್ತರಣೆ, ಹೊಸ ರೈಲು ಮಾರ್ಗಗಳ ಸಮೀಕ್ಷೆ, ಜೋಡಿ ರೈಲು ಮಾರ್ಗ ನಿರ್ಮಾಣ, ನಿಲ್ದಾಣಗಳ ಅಭಿವೃದ್ಧಿ, ಕೋಚಿಂಗ್ ಡಿಪೋ ಸ್ಥಾಪನೆ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆ ಕಾಮಗಾರಿಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಹಲವು ಹೊಸ ರೈಲು ಮಾರ್ಗಗಳ ಕುರಿತು ಪರಿಶೀಲನೆ
ಪ್ರಸ್ತಾವಿತ ತಾಳಗುಪ್ಪ–ಸಿದ್ದಾಪುರ–ಸಿರಸಿ–ಹುಬ್ಬಳ್ಳಿ ಹೊಸ ರೈಲು ಮಾರ್ಗ, ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ–ಮಂಗಳೂರು ರೈಲ್ವೆ ಸಮೀಕ್ಷೆ, ಭದ್ರಾವತಿ–ಚಿಕ್ಕಜಾಜೂರು ಹೊಸ ರೈಲು ಮಾರ್ಗ, ತಾಳಗುಪ್ಪ–ಹೊನ್ನಾವರ ಹೊಸ ರೈಲು ಮಾರ್ಗ ಹಾಗೂ ಶಿವಮೊಗ್ಗ–ಬೀರೂರು ಜೋಡಿ ರೈಲು ಮಾರ್ಗ ಯೋಜನೆಗಳ ಪ್ರಗತಿ ಮತ್ತು ಕಾರ್ಯಸಾಧ್ಯತೆ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಇದರ ಜೊತೆಗೆ ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಪ್ರಸ್ತಾವಿತ ಕೋಚಿಂಗ್ ಡಿಪೋ ಸ್ಥಾಪನೆ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಹೊಸ ರೈಲು ಮಾರ್ಗದ ಮೊದಲ ಹಂತ ಹಾಗೂ ಶಿಕಾರಿಪುರ–ರಾಣೆಬೆನ್ನೂರು ಎರಡನೇ ಹಂತದ ರೈಲು ಮಾರ್ಗ ಕಾಮಗಾರಿ ಕುರಿತೂ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಮೃತ ಭಾರತ ನಿಲ್ದಾಣ ಯೋಜನೆಗೂ ಒತ್ತು
ಅಮೃತ ಭಾರತ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ, ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಲೆವೆಲ್ ಕ್ರಾಸಿಂಗ್‌ಗಳ ಸಮಸ್ಯೆ ಪರಿಹಾರ, ರಸ್ತೆ ಮೇಲ್ಸೇತುವೆ (ROB) ಹಾಗೂ ರಸ್ತೆ ಕೆಳಸೇತುವೆ (RUB) ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಸ್ಥಿತಿಗತಿಯನ್ನೂ ಪರಿಶೀಲಿಸಲಾಯಿತು.
ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ವಿಶೇಷ ಒತ್ತು ನೀಡಲಾಯಿತು.
ತಾಳಗುಪ್ಪ–ಸಿರಸಿ ಮಾರ್ಗದಲ್ಲಿ ಸೊರಬ ಸೇರಿಸಲು ಮನವಿ
ಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸಮೀಕ್ಷೆಯಲ್ಲಿರುವ ಪ್ರಸ್ತಾವಿತ ತಾಳಗುಪ್ಪ–ಸಿದ್ದಾಪುರ–ಸಿರಸಿ ಹೊಸ ರೈಲು ಮಾರ್ಗದಲ್ಲಿ ಸೊರಬವನ್ನು ಸೇರಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಸೊರಬವನ್ನು ಈ ರೈಲು ಮಾರ್ಗದ ವ್ಯಾಪ್ತಿಗೆ ಸೇರಿಸುವುದರಿಂದ ಆ ಭಾಗದ ಜನರಿಗೆ ಉತ್ತಮ ರೈಲ್ವೆ ಸಂಪರ್ಕ ದೊರೆಯುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಭದ್ರಾವತಿ ನಿಲ್ದಾಣ ಅಭಿವೃದ್ಧಿಗೆ ಒತ್ತಾಯ
ಭದ್ರಾವತಿ ರೈಲು ನಿಲ್ದಾಣವನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ಸೇರ್ಪಡೆಗೊಳಿಸಿ, ನಿಲ್ದಾಣದ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಸುಗಮ ಸಂಚಾರ ವ್ಯವಸ್ಥೆ ಹಾಗೂ ಇತರ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿರುವುದನ್ನು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
Shivamogga : ಶಿವಮೊಗ್ಗ ರೈಲು ನಿಲ್ದಾಣಕ್ಕೆ ಸಚಿವರ ಭೇಟಿ
ಪರಿಶೀಲನಾ ಸಭೆಗೂ ಮೊದಲು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಶಿವಮೊಗ್ಗ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರಿಗೆ ಒದಗಿಸಲಾಗಿರುವ ಸೌಲಭ್ಯಗಳು ಹಾಗೂ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳ ಕಾರ್ಯಸ್ಥಿತಿಯನ್ನು ಪರಿಶೀಲಿಸಿದರು.
ಮಲೆನಾಡು ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು, ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Also Read>> ದಸರಾ ಉತ್ಸವ: ಮೈಸೂರು ರೈಲ್ ಮ್ಯೂಸಿಯಂ ಕಾರ್ಯನಿರ್ವಹಣಾ ಅವಧಿ ವಿಸ್ತರಣೆ
ತರೀಕೆರೆ ರೈಲು ನಿಲ್ದಾಣದಲ್ಲೂ ಪರಿಶೀಲನೆ
ಶಿವಮೊಗ್ಗದಲ್ಲಿ ಪರಿಶೀಲನಾ ಸಭೆ ಮತ್ತು ರೈಲು ನಿಲ್ದಾಣದ ಭೇಟಿಯ ಬಳಿಕ ವಿ. ಸೋಮಣ್ಣ ಅವರು ತರೀಕೆರೆ ರೈಲು ನಿಲ್ದಾಣಕ್ಕೂ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಸಾರ್ವಜನಿಕರಿಂದ ರೈಲ್ವೆಗೆ ಸಂಬಂಧಿಸಿದ ಕುಂದುಕೊರತೆಗಳು ಹಾಗೂ ವಿವಿಧ ಸಮಸ್ಯೆಗಳನ್ನು ಆಲಿಸಿದ ಸಚಿವರು, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ ಮತ್ತು ಡಿ.ಎಸ್. ಅರುಣ್, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಭಯ್ ಕುಮಾರ್ ಗುಪ್ತಾ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











