ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಸಂಸತ್ತು ಕೋಟ್ಯಂತರ ಜನರ ಧ್ವನಿಯಾಗಿದ್ದು, ಸಂವಿಧಾನದ ಶಕ್ತಿ ಹಾಗೂ ಪ್ರಜಾಪ್ರಭುತ್ವದ (Democrasy) ಪ್ರಮುಖ ಆಧಾರಸ್ತಂಭವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸದೃಢವಾಗಿ ಉಳಿಯುವಲ್ಲಿ ಯುವಶಕ್ತಿ (Youth Power) ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಹೇಳಿದರು.
ಚಾಮರಾಜನಗರ ಜಿಲ್ಲಾ ಮೈ ಭಾರತ್ ಯುವ ಕೇಂದ್ರ ಹಾಗೂ ವಸತಿಯುಕ್ತ ಸರ್ಕಾರಿ ಪದವಿ ಕಾಲೇಜು, ಭೋಗಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ‘ನೆರೆಹೊರೆಯ ಯುವ ಸಂಸತ್ತು’ ಹಾಗೂ ‘ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಮಗ್ರ ಕಾನೂನುಗಳನ್ನು ರೂಪಿಸುವುದು, ಸರ್ಕಾರದ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು ಹಾಗೂ ಜನರ ಆಶಯಗಳಿಗೆ ಅನುಗುಣವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ದೇಶವನ್ನು ಮುನ್ನಡೆಸುವುದು ಶಕ್ತಿಶಾಲಿ ಸಂಸತ್ತಿನ ಪ್ರಮುಖ ಜವಾಬ್ದಾರಿಯಾಗಿದೆ. ಸಂಸತ್ತು ಕಾನೂನು ರಚನೆ, ಹಣಕಾಸಿನ ಅಧಿಕಾರ, ಸರ್ಕಾರದ ಜವಾಬ್ದಾರಿತನ, ಚರ್ಚೆ ಮತ್ತು ಸಂವಾದ, ಸಂವಿಧಾನ ತಿದ್ದುಪಡಿ ಹಾಗೂ ನ್ಯಾಯಾಂಗದ ಮೇಲ್ವಿಚಾರಣೆ ಸೇರಿದಂತೆ ಪ್ರಜಾಪ್ರಭುತ್ವವನ್ನು ಸದಾ ಬಲಪಡಿಸುವ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

Youth Power: ಯುವಶಕ್ತಿಯೇ ಭಾರತದ ದೊಡ್ಡ ಸಂಪತ್ತು
ಭಾರತವು ಶೇಕಡ 51ಕ್ಕೂ ಹೆಚ್ಚು ಯುವಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಶಕ್ತಿಯೇ ಯುವಕರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ. ಯುವಜನರು ಸಂಸತ್ತಿನ ಕಾರ್ಯವೈಖರಿ, ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಸಮಾಜ ಸೇವೆ, ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಕರು ಸಾಧನೆ ಮಾಡುವ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು. ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಶಿಕ್ಷಣದಲ್ಲಿನ ಅಸಮಾನತೆ ಹಾಗೂ ಮಾದಕ ವಸ್ತುಗಳ ಬಳಕೆಯಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವಲ್ಲಿ ಜವಾಬ್ದಾರಿಯುತ ಆಡಳಿತ ಮತ್ತು ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಯುವ ಸಂಸತ್ತು ಸ್ಪರ್ಧೆಯಿಂದ ಪ್ರಜಾಪ್ರಭುತ್ವದ ಅರಿವು
‘ನೆರೆಹೊರೆಯ ಯುವ ಸಂಸತ್ತು’ ಸ್ಪರ್ಧೆಗಳು ಯುವಜನರಲ್ಲಿ ಪ್ರಜಾಪ್ರಭುತ್ವದ ಅರಿವು, ವಾಕ್ಚಾತುರ್ಯ, ಶಿಸ್ತು ಹಾಗೂ ದೇಶದ ಆಡಳಿತ ವ್ಯವಸ್ಥೆಯ ಕುರಿತು ಜ್ಞಾನವನ್ನು ಹೆಚ್ಚಿಸುತ್ತವೆ. ವಾದ-ವಿವಾದ, ಚರ್ಚೆ, ವಿಷಯಾಧಾರಿತ ಅಧ್ಯಯನ, ಪರಿಣಾಮಕಾರಿಯಾಗಿ ಮಾತನಾಡುವ ಕಲೆ, ವಿರೋಧ ಪಕ್ಷದ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಸಂಸದೀಯ ನಿಯಮಾವಳಿಗಳ ಕುರಿತು ತಿಳಿದುಕೊಳ್ಳಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಯುವ ಸಂಸತ್ತು ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವದ ಶಕ್ತಿ ಜನರಲ್ಲಿದ್ದು, ಜನರ ಧ್ವನಿ ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತದೆ. ದೇಶದ ಶ್ರೇಷ್ಠ ಸಂಸದೀಯ ಪಟುಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ನೀಡಿರುವ ಕೊಡುಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಯುವಕರು ದುಶ್ಚಟಗಳು ಹಾಗೂ ಮಾದಕ ವ್ಯಸನಗಳಿಗೆ ಬಲಿಯಾಗದೆ, ವ್ಯಸನಮುಕ್ತ ಜೀವನ ನಡೆಸಬೇಕು. ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ಹಾಗೂ ಶ್ರದ್ಧೆ ತೋರಿ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಗುರಿ ಹೊಂದಬೇಕು ಎಂದು ಸುರೇಶ್ ಎನ್. ಋಗ್ವೇದಿ ಕರೆ ನೀಡಿದರು.

ಯುವಕರ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಮೈ ಭಾರತ್ ಯುವ ಕೇಂದ್ರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈ ಭಾರತ್ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಶಾಲೋಮ್ ಫಿಲಿಪ್ ಥಾಮಸ್, ದೇಶದ ಯುವಕರನ್ನು ಸಂಘಟಿಸಿ ಅವರಲ್ಲಿ ಭಾವೈಕ್ಯತೆ, ಏಕತೆ, ಕ್ರೀಡಾ ಮನೋಭಾವ ಹಾಗೂ ಸಾಮಾಜಿಕ ಬೆಳವಣಿಗೆಯ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಮೈ ಭಾರತ್ ಯುವ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.
ಯುವಕರ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವಕರು ಮೈ ಭಾರತ್ ಸದಸ್ಯರಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವ್ಯಸನಮುಕ್ತ ಯುವಶಕ್ತಿಯಿಂದ ಸದೃಢ ಭಾರತ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿ. ದೇವರಾಜು ಮಾತನಾಡಿ, ಸದೃಢ ಭಾರತ ನಿರ್ಮಾಣಕ್ಕೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅಗತ್ಯವಿದೆ. ಸಮಾಜದಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
Also Read>> ಸೊರಬ | ಸಾನ್ವಿ ವಿಕಾಸ್ ಭರತನಾಟ್ಯ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ
ಯುವಶಕ್ತಿ ಮಾದಕ ವಸ್ತುಗಳು ಸೇರಿದಂತೆ ವಿವಿಧ ವ್ಯಸನಗಳಿಗೆ ಬಲಿಯಾಗದೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಐಕ್ಯೂಎಸಿ ಸಂಚಾಲಕ ಪ್ರೊ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನೆರೆಹೊರೆಯ ಯುವ ಸಂಸತ್ತು ಹಾಗೂ ನಶಾ ಮುಕ್ತ ಭಾರತದ ಪರಿಕಲ್ಪನೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮೈ ಭಾರತ್ ಯುವ ಕೇಂದ್ರದ ಸಹನಾ, ಸರ್ಕಾರಿ ಪದವಿ ಕಾಲೇಜಿನ ಪ್ರೊ. ರಂಗಸ್ವಾಮಿ, ಪ್ರೊ. ರಮೇಶ್ ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












