ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸನಾತನ ಧರ್ಮ (Sanatana Dharma) ಸ್ತ್ರೀಯರ ವಿರುದ್ಧವಾಗಿಲ್ಲ. ಧರ್ಮಶಾಸ್ತ್ರದಲ್ಲಿ ಸ್ತ್ರೀಯರಿಗೆ ಅವರದ್ದೇ ಆದ ಮಹತ್ವ ಹಾಗೂ ಗೌರವವಿದೆ. ಸನಾತನ ಧರ್ಮದ ವಿಚಾರಗಳನ್ನು ಕೆಲವರು ಅಪವ್ಯಾಖ್ಯಾನ ಮಾಡುತ್ತಾರೆ. ಆದರೆ ಧರ್ಮಶಾಸ್ತ್ರವು ಸ್ತ್ರೀಯರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Shri) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 16ರಂದು ನಡೆದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಅನುಗ್ರಹಿಸಿ ಮಾತನಾಡಿದರು.

ಗಂಡನ ಪುಣ್ಯದಲ್ಲಿ ಹೆಂಡತಿಗೆ ಪಾಲು, ಪಾಪದಲ್ಲಿ ಇಲ್ಲ
ಸನಾತನ ಧರ್ಮದಲ್ಲಿ ಸ್ತ್ರೀಯರ ಕುರಿತಾದ ಕಾಳಜಿಯನ್ನು ವಿವರಿಸಿದ ಶ್ರೀಗಳು, ಗಂಡನ ಪಾಪದಲ್ಲಿ ಹೆಂಡತಿಗೆ ಪಾಲಿಲ್ಲ. ಆದರೆ ಗಂಡನ ಪುಣ್ಯದ ಫಲದಲ್ಲಿ ಹೆಂಡತಿಗೆ ಪಾಲಿದೆ. ಅದೇ ರೀತಿ ಹೆಂಡತಿಯ ಪುಣ್ಯದಲ್ಲಿ ಗಂಡನಿಗೆ ಫಲವಿಲ್ಲ. ಆದರೆ ಹೆಂಡತಿಯ ಪಾಪದಲ್ಲಿ ಗಂಡನಿಗೆ ಪಾಲಿದೆ ಎಂದು ಲಲಿತೋಪಾಖ್ಯಾನದ ಕಥೆಯೊಂದರ ಆಧಾರದಲ್ಲಿ ವಿವರಿಸಿದರು.
ಧರ್ಮಶಾಸ್ತ್ರದಲ್ಲಿರುವ ಇಂತಹ ವಿಚಾರಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಸನಾತನ ಧರ್ಮವನ್ನು ತಪ್ಪಾಗಿ ಅರ್ಥೈಸುವ ಅಥವಾ ಅಪವ್ಯಾಖ್ಯಾನ ಮಾಡುವ ಬದಲು ಅದರಲ್ಲಿರುವ ಮೌಲ್ಯಗಳು ಹಾಗೂ ಸ್ತ್ರೀಯರಿಗೆ ನೀಡಿರುವ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಅನ್ಯಾಯದ ಸಂಪಾದನೆ ಮನಸ್ಸನ್ನು ಭ್ರಮೆಗೀಡು ಮಾಡುತ್ತದೆ
ಅನಿರೀಕ್ಷಿತವಾಗಿ ಬರುವ ಸಂಪತ್ತು ಸ್ಥಿರವಾಗಿರುವುದಿಲ್ಲ. ಆಕಸ್ಮಿಕವಾಗಿ ಸಂಪತ್ತು ದೊರೆತಾಗ ಮನುಷ್ಯನ ವಿವೇಕವು ಸರಿಯಾಗಿ ಕೆಲಸ ಮಾಡದೆ ಹೋಗಬಹುದು. ಅನ್ಯಾಯದ ಮಾರ್ಗದಿಂದ ಸಂಪಾದಿಸಿದ ಹಣ ಬಂದಾಗ ಮನಸ್ಸು ಭ್ರಮೆಗೊಳಗಾಗುತ್ತದೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಬೃಹಸ್ಪತಿಯು ಇಂದ್ರನಿಗೆ ಉಪದೇಶಿಸಿದ ಕಥೆಯನ್ನು ಉಲ್ಲೇಖಿಸಿದ ಅವರು, ವಜ್ರ ಎಂಬ ಕಳ್ಳನು ಹಣವನ್ನು ಕದ್ದು ಕಾಡಿನಲ್ಲಿ ಬಚ್ಚಿಡುತ್ತಿದ್ದ ಪ್ರಸಂಗವನ್ನು ವಿವರಿಸಿದರು.
ಆ ಹಣವನ್ನು ನೋಡಿದ ವೀರದತ್ತ ಎಂಬ ವ್ಯಾಧನು ಕದ್ದ ಹಣದ ಹತ್ತನೇ ಒಂದು ಭಾಗವನ್ನು ತೆಗೆದುಕೊಂಡು, ತನ್ನ ಹೆಂಡತಿಯ ಸಲಹೆಯಂತೆ ಜನೋಪಯೋಗಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಾನೆ. ಆದರೆ ಕದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿದ್ದರೂ, ವೀರದತ್ತನಿಗೆ ಅದರ ಪರಿಣಾಮದಿಂದ ತಕ್ಷಣ ಸದ್ಗತಿ ದೊರೆಯುವುದಿಲ್ಲ. ಬಳಿಕ ಆತ ಉತ್ತಮ ಗತಿಯನ್ನು ಪಡೆಯುತ್ತಾನೆ ಎಂದು ಕಥೆಯ ಮೂಲಕ ವಿವರಿಸಿದರು.
ವೀರದತ್ತ ಮಾಡಿದ ಪುಣ್ಯಕಾರ್ಯಗಳ ಫಲದಲ್ಲಿ ಹಣವನ್ನು ಕದ್ದ ವಜ್ರನಿಗೂ ಹಾಗೂ ಹಣದ ನಿಜವಾದ ಮಾಲೀಕರಿಗೂ ಪಾಲು ದೊರೆಯುತ್ತದೆ. ಈ ಕಥೆಯು ಪಾಪ-ಪುಣ್ಯಗಳ ನಿರ್ಧಾರ ಹಾಗೂ ಅನ್ಯಾಯದ ಸಂಪತ್ತಿನ ಬಳಕೆಯ ಪರಿಣಾಮದ ಕುರಿತು ಮಹತ್ವದ ಸಂದೇಶ ನೀಡುತ್ತದೆ ಎಂದು ಶ್ರೀಗಳು ಹೇಳಿದರು.

Raghaveshwara Shri: ನವರಾತ್ರ ವ್ರತದಲ್ಲಿ ಆಹಾರ ನಿಯಮ ಪಾಲನೆ ಅಗತ್ಯ
ವ್ರತ ಎಂಬ ಶಬ್ದದೊಂದಿಗೆ ಆಹಾರ ನಿಯಮವೂ ಸೇರಿಕೊಂಡಿದೆ. ನವರಾತ್ರ ವ್ರತವನ್ನು ಆಚರಿಸುವವರು ಒಂಬತ್ತು ದಿನಗಳ ಕಾಲ ಉಪವಾಸ ಕೈಗೊಳ್ಳುವುದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಲ್ಲರಿಗೂ ಸಂಪೂರ್ಣ ಉಪವಾಸ ಸಾಧ್ಯವಾಗದಿದ್ದರೆ ಒಂದೇ ಹೊತ್ತಿನ ಊಟ ಮಾಡಬಹುದು ಅಥವಾ ಶುದ್ಧ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ ನವರಾತ್ರ ವ್ರತವನ್ನು ಆಚರಿಸಬಹುದು ಎಂದು ಶ್ರೀಗಳು ಕಿವಿಮಾತು ಹೇಳಿದರು.
ವ್ರತದ ಸಂದರ್ಭದಲ್ಲಿ ಆಹಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಶ್ರದ್ಧೆ, ಸಂಯಮ ಮತ್ತು ಭಕ್ತಿಯಿಂದ ಆಚರಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Also Read>> ಯುವಶಕ್ತಿಯಿಂದ ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯವಾಗಲಿ: ಸುರೇಶ್ ಎನ್. ಋಗ್ವೇದಿ
ವಿವಿಧ ಧಾರ್ಮಿಕ ಕಾರ್ಯಕ್ರಮಗಳು
‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ಶ್ರೀಸೂಕ್ತ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಮಂಡಳಿಗಳಿಂದ ಭಜನೆ ಹಾಗೂ ದುರ್ಗಾ ದೀಪನಮಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಖ್ಯಾತ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ, ವಿದ್ವಾನ್ ಬಂದಗದ್ದೆ ನಾಗರಾಜ್, ಶ್ರೀಕಂಠಯ್ಯ ಹೆಬ್ಬಾಲೆ, ಉದ್ಯಮಿ ವಾದಿರಾಜ ಸಾಮಗ ಹಾಗೂ ದಿನಪ್ರಧಾನರಾಗಿ ಎನ್.ಜಿ. ಭಾಗ್ವತ್ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












