ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ನಗರದ ಗೋಪಾಳದ ಕ್ರೀಡಾ ಸಂಕೀರ್ಣ ಹಾಗೂ ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶದಲ್ಲಿ ಅಂತರ ಶಾಲಾ ಸ್ಕೇಟಿಂಗ್ ಸ್ಪರ್ಧೆ(Skating Compitation) ಹಾಗೂ ರಾಜ್ಯಮಟ್ಟದ ಸ್ಕೇಟರ್ಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ.) ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದ್ದು, ಪತ್ರಕರ್ತ ಜಿ. ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಹಾಗೂ ರಾಷ್ಟ್ರೀಯ ಕರಾಟೆ ಅಸೋಸಿಯೇಷನ್ ಪ್ರಮುಖ ವಿನೋದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿಭೆ ಹೊರತರಲು ಸ್ಕೇಟಿಂಗ್ ಸಂಸ್ಥೆ ವೇದಿಕೆ
ಕಾರ್ಯಕ್ರಮದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್, ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕೇಟಿಂಗ್ ಸಂಸ್ಥೆಯು ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದರು.
ಕ್ರೀಡಾಪಟುಗಳ ಸಾಧನೆಯ ಹಿಂದೆ ಪೋಷಕರ ಸಹಕಾರ ಹಾಗೂ ಸಹನೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆಯನ್ನು ಬೆಳೆಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಸೋಲಿನಿಂದ ಕುಗ್ಗದೆ, ಗೆಲುವಿನಿಂದ ಹಿಗ್ಗದೆ ಮುನ್ನಡೆಯಿರಿ
ರಾಷ್ಟ್ರೀಯ ಕರಾಟೆ ಅಸೋಸಿಯೇಷನ್ ಪ್ರಮುಖ ವಿನೋದ್ ಮಾತನಾಡಿ, ಇಂದು ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಮುಂದಿನ ಗೆಲುವಿಗಾಗಿ ನಿರಂತರ ಪ್ರಯತ್ನ ನಡೆಸಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

Shivamogga: ನೂರಾರು ಮಕ್ಕಳಿಗೆ ನಿರಂತರ ತರಬೇತಿ
ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್.ಕೆ. ಗಜೇಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 2010ರಿಂದ ಹಳೆಯ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ ಇದೀಗ ನಿತ್ಯ ನೂರಾರು ಮಕ್ಕಳಿಗೆ ಕ್ರೀಡಾ ಸಂಕೀರ್ಣ ಹಾಗೂ ಶಿವಮೊಗ್ಗ ಹೆಲಿಫ್ಯಾಡ್ನಲ್ಲಿ ತರಬೇತಿ ನೀಡುತ್ತಿದೆ ಎಂದರು.
ಸಂಸ್ಥೆಯ ತರಬೇತಿ ಪಡೆದ ಮಕ್ಕಳು ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ತಮ ತರಬೇತುದಾರರು ಲಭ್ಯವಿದ್ದು, ಅವರ ಮಾರ್ಗದರ್ಶನದಲ್ಲಿ ಮಕ್ಕಳ ಕ್ರೀಡಾ ಸಾಮರ್ಥ್ಯ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಕಾರಣರಾದ ಎಲ್ಲ ಕ್ರೀಡಾಪಟುಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.

200ಕ್ಕೂ ಹೆಚ್ಚು ಮಕ್ಕಳು ಭಾಗಿ
ಸ್ಪರ್ಧೆಯಲ್ಲಿ ರೋಡ್ ರೇಸ್ ಹಾಗೂ ರಿಂಗ್ ರೇಸ್ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು. ಮಕ್ಕಳೊಂದಿಗೆ ಪೋಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಕ್ರೀಡಾ ಸಂಕೀರ್ಣದಲ್ಲಿ ಸ್ಕೇಟಿಂಗ್ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನಲ್ಲಿ ತರಬೇತಿ ಪಡೆದ ಉನ್ನತ ಮಟ್ಟದ ತರಬೇತುದಾರರು ಸ್ಪರ್ಧೆಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ಸ್ಕೇಟರ್ಗಳನ್ನು ಮುಂದಿನ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.
Also Read>> 2 ನಿಮಿಷದಲ್ಲಿ 12 ಇಡ್ಲಿ, 13 ಬಾಳೆಹಣ್ಣು! ಶಿವಮೊಗ್ಗ ದಸರಾದಲ್ಲಿ ತಿನ್ನುವ ಸ್ಪರ್ಧೆಯೇ ಹೈಲೈಟ್ : ಯಾರು ಫಸ್ಟ್?
ಪ್ರತಿಭೆ ಗುರುತಿಸಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಅವಕಾಶ
ವೇಗದ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವುದು ಹಾಗೂ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಉತ್ತಮ ಅವಕಾಶ ಕಲ್ಪಿಸುವುದು ಚಾಂಪಿಯನ್ಶಿಪ್ನ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎಂ. ರವಿ, ಸಂಸ್ಥೆಯ ಪ್ರಮುಖರು ಹಾಗೂ ವಕೀಲ ಪ್ರವೀಣ್, ತರಬೇತುದಾರರಾದ ವಿಶ್ವಾಸ್, ಅತೀಶ್, ಯೂಟ್ಯೂಬ್ ಚಾನೆಲ್ನ ವಿರೂಪಾಕ್ಷಪ್ಪ, ಅಸೋಸಿಯೇಷನ್ನ ತಾರಾನಾಥ್, ಸುಧೀರ್, ಶ್ರೀನಾಥ್, ರಘು ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











