ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇವತೆಗಳು (Devine) ಕೋಲನ್ನು ತೆಗೆದುಕೊಂಡು ಜೀವಿಗಳಿಗೆ ದಂಡನೆ ಮಾಡುವುದಿಲ್ಲ. ಯಾರನ್ನಾದರೂ ಉದ್ಧಾರ ಮಾಡಬೇಕೆಂದಾಗ ದೇವರು ಅವರಿಗೆ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುತ್ತಾರೆ. ಅದೇ ರೀತಿ ಶಿಕ್ಷೆ ನೀಡಬೇಕಾದ ಸಂದರ್ಭದಲ್ಲಿ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿಯು ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shri) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರಿ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ಅ.19ರಂದು ನಡೆದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು ಅನುಗ್ರಹ ಭಾಷಣ ಮಾಡಿದರು.
ಬುದ್ಧಿಯ ದಿಕ್ಕಿನಿಂದಲೇ ಏಳಿಗೆ-ಪತನ ಅರಿಯಬಹುದು
ನಮ್ಮ ಏಳಿಗೆ ಮತ್ತು ಪತನದ ಲಕ್ಷಣಗಳನ್ನು ನಮ್ಮಲ್ಲೇ ಕಾಣಬಹುದಾಗಿದೆ. ನಮ್ಮ ಬುದ್ಧಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ನಮ್ಮ ಆಚರಣೆಗಳು ಹೇಗಿವೆ ಎಂಬುದನ್ನು ಅವಲೋಕಿಸಿಕೊಂಡರೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನು ಅರಿತುಕೊಳ್ಳಬಹುದು ಎಂದು ಶ್ರೀಗಳು ಹೇಳಿದರು.
ನಾವು ಸರಿದಾರಿಯಲ್ಲಿ ಸಾಗುತ್ತಿದ್ದರೆ ದೇವರು ನಮ್ಮನ್ನು ಅನುಗ್ರಹಿಸುತ್ತಿದ್ದಾನೆ ಎಂದು ಅರ್ಥ. ತಪ್ಪು ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದರೆ ದೇವರ ಅವಕೃಪೆಗೆ ಒಳಗಾಗುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.
ಶಿವಭಕ್ತನಾಗಿ ನಿತ್ಯವೂ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದ ಭಂಡಾಸುರನು ವಿಷ್ಣುಮಾಯೆಯಿಂದ ಮೋಹಿನಿಯ ಮೋಹಕ್ಕೆ ಒಳಗಾಗಿ ದೇವರ ಆರಾಧನೆಯಿಂದ ವಿಮುಖನಾದ. ಅಲ್ಲಿಂದಲೇ ಆತನ ಅವನತಿಯ ಆರಂಭವಾಯಿತು ಎಂದು ಭಂಡಾಸುರನ ಕಥಾಭಾಗವನ್ನು ವಿವರಿಸಿದರು.

Raghaveshwar Shri: ಸೃಷ್ಟಿಯಲ್ಲಿ ಹಸ್ತಕ್ಷೇಪ ಮಾಡಬಾರದು
ಸೃಷ್ಟಿಯನ್ನು ನಾವು ಯಾವಾಗಲೂ ವ್ಯತ್ಯಾಸಗೊಳಿಸಲು ಹೋಗಬಾರದು. ಸೃಷ್ಟಿ ಎಂಬುದು ‘ಶಂಕರ’ವಾದರೆ, ಸೃಷ್ಟಿಯಲ್ಲಿ ನಮ್ಮ ಹಸ್ತಕ್ಷೇಪ ‘ಸಂಕರ’ವಾಗುತ್ತದೆ. ನೈಸರ್ಗಿಕ ಪ್ರಕ್ರಿಯೆ ಯಾವಾಗಲೂ ಸುಂದರವಾಗಿದ್ದು, ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ತಾರಕಾಸುರನ ವಧೆ ಶಿವನ ಮಗನಿಂದ ಆಗಬೇಕಿತ್ತು. ಧ್ಯಾನದಲ್ಲಿದ್ದ ಶಿವನನ್ನು ಒಲಿಸಿಕೊಳ್ಳಲು ದೇವತೆಗಳು ತಪಸ್ಸಿನ ಮಾರ್ಗವನ್ನು ಅನುಸರಿಸಬಹುದಾಗಿತ್ತು. ಆದರೆ ಮನ್ಮಥನ ಬಾಣವನ್ನು ಶಿವನ ಮೇಲೆ ಪ್ರಯೋಗಿಸುವಂತೆ ಮಾಡಿದರು.
ಹೂವನ್ನು ಬಾಣವಾಗಿ ಪ್ರಯೋಗಿಸುವ ಬದಲು ಅದೇ ಹೂವನ್ನು ಪೂಜೆಗೆ ಬಳಸಿದ್ದರೆ ಶಿವನು ಸಂಪ್ರೀತನಾಗುತ್ತಿದ್ದ. ತಾರಕಾಸುರನ ಸಂಹಾರವೂ ಆಗುತ್ತಿತ್ತು. ಆದರೆ ಮನ್ಮಥನ ಬಾಣ ಪ್ರಯೋಗದಿಂದ ತಾರಕಾಸುರನ ಪೀಡೆಯ ಜತೆಗೆ ಭಂಡಾಸುರನ ಕಾಟವನ್ನೂ ದೇವತೆಗಳು ಅನುಭವಿಸುವಂತಾಯಿತು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಲಲಿತೋಪಾಖ್ಯಾನದ ತತ್ತ್ವಗಳನ್ನು ನೆನಪಿನಲ್ಲಿಡಬೇಕು
ಲಲಿತೋಪಾಖ್ಯಾನದಲ್ಲಿ ದೇವಿಯನ್ನು ವರ್ಣಿಸುವ ಮೂಲಕ ರಾಜರಾಜೇಶ್ವರಿಯ ದಿವ್ಯ ರೂಪವು ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿ, ಧ್ಯಾನದಲ್ಲಿ ಆಕೆ ಸಾಕ್ಷಾತ್ಕಾರವಾಗುವಂತಾಗಬೇಕು. ಇದಕ್ಕಾಗಿ ಪ್ರವಚನ ಮಾಲಿಕೆಯಲ್ಲಿನ ಕಥೆಗಳು ಮತ್ತು ಅದರಲ್ಲಿರುವ ತತ್ತ್ವಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಸಹಕಾರಿಯಾಗುತ್ತದೆ ಎಂದು ಶ್ರೀಗಳು ಹೇಳಿದರು.
ಈ ಪ್ರವಚನ ಮಾಲಿಕೆಯು ಹಯಗ್ರೀವನಿಂದ ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಲ್ಪಟ್ಟ ಲಲಿತೋಪಾಖ್ಯಾನದ ಯಥಾವತ್ ಪ್ರಸ್ತುತಿಯಾಗಿದ್ದು, ಜನಮನರಂಜನೆಯ ವಿಷಯಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
Also Read>> ಶಿವಮೊಗ್ಗ ದಸರಾ-2026: ಅ.21ರಂದು ಸಂಗೀತ ಸೀಮೋಲ್ಲಂಘನಕ್ಕೆ ಸಜ್ಜಾದ ಫ್ರೀಡಂ ಪಾರ್ಕ್
ವಿಜಯೇಂದ್ರ ಸೇರಿದಂತೆ ಗಣ್ಯರಿಂದ ಶ್ರೀಗಳ ಆಶೀರ್ವಾದ
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಸವನಗುಡಿ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಖ್ಯಾತ ಶಿಲ್ಪಿ ಜಿ.ಎಲ್. ಭಟ್ ಹಾಗೂ ಉದ್ಯಮಿ ಅರವಿಂದ್ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸರಸ್ವತೀ ಸೂಕ್ತ ಹವನ, ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ ಹಾಗೂ ರಾಜರಾಜೇಶ್ವರೀ ಪೂಜೆ ನೆರವೇರಿತು. ಸುಬ್ರಾಯ ಹೆಗಡೆ ಹೊಸಕೋಟೆ, ಸಂದೀಪ್ ಮೂರ್ತಿ, ಪ್ರಕಾಶ್ ಮಳಲಗದ್ದೆ ಹಾಗೂ ದಿನಪ್ರಧಾನರಾಗಿ ಸುಬ್ರಹ್ಮಣ್ಯ ಕೆರೆಮೂಲೆ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









