ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
“ನಾನು ಮೊದಲು ಪ್ಲೇಯರ್ ಆಗಿದ್ದೆ. ಈಗ ಆಂಪೈರ್ ಆಗಿದ್ದೇನೆ, ಜಡ್ಜ್ ಆಗಿದ್ದೇನೆ. ಸಭಾಪತಿಯಾದ ಬಳಿಕ ನಾನು ಪಕ್ಷಾತೀತನಾಗಿದ್ದು, ಎಲ್ಲರನ್ನೂ ಸಮಾನವಾಗಿ ಕಾಣುವ ಜವಾಬ್ದಾರಿ ನನ್ನ ಮೇಲಿದೆ” ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಹೇಳಿದರು. ಶಿವಮೊಗ್ಗ (Shivamogga) ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ (SDMF) ವತಿಯಿಂದ ನಗರದ ಇಲ್ಯಾಸ್ ನಗರದ ಫಾರೂಕಿಯಾ ಶಾದಿ ಮಹಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೋಮು ಸೌಹಾರ್ದತೆ ಅಗತ್ಯ
ಶೇರ್ ಹೇಳುವ ಮೂಲಕ ಮಾತು ಆರಂಭಿಸಿದ ಸಲೀಂ ಅಹಮದ್, ಸಭಾಪತಿಯಾದ ಬಳಿಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಮಹತ್ವ ಇನ್ನಷ್ಟು ಅರಿವಾಗಿದೆ. ಮಹಾತ್ಮ ಗಾಂಧೀಜಿ ಅವರೊಂದಿಗೆ ಮೌಲಾನಾ ಆಜಾದ್ ಅವರಂತಹ ನಾಯಕರು ದೇಶಕ್ಕಾಗಿ ದುಡಿದಿದ್ದಾರೆ. ದೇಶಕ್ಕೆ ಅಗತ್ಯ ಎದುರಾದಾಗ ಮುಸ್ಲಿಮರು ತಮ್ಮ ಜೀವವನ್ನೇ ನೀಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕೋಮು ಸೌಹಾರ್ದತೆಯ ಅಗತ್ಯ ಹೆಚ್ಚಿದೆ. ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಸಭಾಪತಿ ಸ್ಥಾನದಲ್ಲಿರುವುದರಿಂದ ಈಗ ನಾನು ಪಕ್ಷಾತೀತನಾಗಿದ್ದೇನೆ. ಹೀಗಾಗಿ ಯಾವುದೇ ಪಕ್ಷದ ಪರವಾಗಿ ರಾಜಕೀಯ ಮಾತನಾಡಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಬಾಳುವ ಮತ್ತು ಬದುಕುವ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
Shivamogga: ಜನರ ಸಮಸ್ಯೆಗಳಿಗೆ ಸದನದಲ್ಲಿ ಪರಿಹಾರ ಸಿಗಬೇಕು
ರಾಜ್ಯದಲ್ಲಿ ಬರ ಹಾಗೂ ರೈತರ ಸಮಸ್ಯೆಗಳು ಸೇರಿದಂತೆ ಹಲವು ಸವಾಲುಗಳಿವೆ. ಅಲ್ಪಸಂಖ್ಯಾತ ಸಮುದಾಯದಿಂದಲೂ ಹಲವು ಬೇಡಿಕೆಗಳು ಬಂದಿವೆ. ಅವುಗಳನ್ನು ಸಂಬಂಧಪಟ್ಟ ಪಕ್ಷಗಳು ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಸಲೀಂ ಅಹಮದ್ ಭರವಸೆ ನೀಡಿದರು.
“ರಾಜ್ಯದ ಸುಮಾರು ಏಳು ಕೋಟಿ ಜನರಲ್ಲಿ ಕೇವಲ 300 ಜನರಿಗೆ ಮಾತ್ರ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಗುತ್ತದೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ಜನರ ಆಶೀರ್ವಾದವೇ ಕಾರಣ. ಸದನಗಳಲ್ಲಿ ಮುಖ್ಯವಾಗಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಅವುಗಳಿಗೆ ಪರಿಹಾರ ಸಿಗಬೇಕು” ಎಂದು ಹೇಳಿದರು.
ಸಭಾಪತಿಯಾದ ನಂತರ ಪಕ್ಷಗಳ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಜನರು ಲಿಖಿತವಾಗಿ ನೀಡಿರುವ ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ
ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಸಾಧ್ಯ. ಆದ್ದರಿಂದ ಅಲ್ಪಸಂಖ್ಯಾತ ಸಮುದಾಯವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ವಿಶೇಷ ಗಮನ ಹರಿಸಬೇಕು ಎಂದು ಸಲೀಂ ಅಹಮದ್ ಕರೆ ನೀಡಿದರು.
ಸಭಾಪತಿ ಸ್ಥಾನವನ್ನು ಜಾತ್ಯತೀತವಾಗಿ ನಿಭಾಯಿಸುತ್ತಿದ್ದಾರೆ: ಬಲ್ಕೀಸ್ ಬಾನು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಸ್ಥಾನ ಅತ್ಯಂತ ಗೌರವಯುತ ಹಾಗೂ ಉನ್ನತ ಸ್ಥಾನವಾಗಿದೆ. ಸಲೀಂ ಅಹಮದ್ ಅವರು ಆ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಮತ್ತು ಜಾತ್ಯತೀತವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅಭಿನಂದಿಸಿದರು.
15 ಸಾವಿರ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಉರ್ದು ಶಿಕ್ಷಕರ ನೇಮಕಕ್ಕೆ ಅವಕಾಶ ಇಲ್ಲದಿರುವ ವಿಷಯವನ್ನು ಸಲೀಂ ಅಹಮದ್ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿದ್ದರು. ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರ ಗಮನ ಸೆಳೆದಿದ್ದರು ಎಂದು ಹೇಳಿದರು.
Also Read>> ಇಂದ್ರಿಯಾದಿಂದ 1,600 ಚದರ ಅಡಿ ಪರಿಸರಸ್ನೇಹಿ ಆಭರಣ ರಂಗವಲ್ಲಿ ಅನಾವರಣ
35 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಸಲೀಂ ಅಹಮದ್ ಅವರು, ಆಡಳಿತ ವ್ಯವಸ್ಥೆಯಲ್ಲಿ ಲೋಪ ಕಂಡುಬಂದಾಗ ಅದನ್ನು ಸರಿಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಬಲ್ಕೀಸ್ ಬಾನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೌಲಾನಾ ಹಾಫಿಜ್ ಮುಸಾವಿರ್ ಸಾಬ್ ಕಿರಾತ್ ನೆರವೇರಿಸಿದರು. ಮೊಹಮದ್ ಮುಹೀಬ್ ಉಲ್ಲಾ ಮತ್ತು ಆಸಿಫ್ ಷರೀಫ್ ಸ್ವಾಗತಿಸಿದರು. ಮೌಲಾನಾ ಹಮೀದ್ ಉಮ್ರಿ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಜರತ್ ಸೈಯದ್ ಶಾ ಹೈದರ್ ವಲಿ ಸಜ್ಜಾದ ನಶೀನ್, ಮುಕ್ತಿಯಾರ್ ಅಹಮದ್ ಸಾಬ್, ಸೈಯದ್ ವಾಹಿದ್ ಅದ್ದು, ರಿಯಾಜ್ ಅಹಮದ್, ಮುಷ್ತಿಯಾರ್ ಅಹಮದ್, ಅಫ್ತಾಬ್ ಪರ್ವೇಜ್, ಶಿ ಜು ಪಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಿಯಾಜ್ ಅಹಮದ್ ಸಾಬ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









