ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ದರ ಏರಿಕೆ ಶಾಕ್ ನೀಡಿದೆ. ನಂದಿನಿ ಹಾಲಿನ ದರವನ್ನು (Nandini Milk Price) ಪ್ರತಿ ಲೀಟರ್ಗೆ ₹8 ಹೆಚ್ಚಿಸಲು (Hike) ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪರಿಷ್ಕೃತ ದರ ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಪರಿಷ್ಕರಣೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚಳವಾಗುವ ₹8 ಪೈಕಿ ₹7ನ್ನು ಹಾಲು ಉತ್ಪಾದಕರಿಗೆ ನೀಡಲು ಹಾಗೂ ಉಳಿದ ₹1ನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಗೆ ನೀಡಲು ನಿರ್ಧರಿಸಲಾಗಿದೆ.
ರೈತರಿಗೆ ಲೀಟರ್ಗೆ ₹47
ಹಾಲಿನ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ದೊರೆಯುವ ಮೊತ್ತವೂ ಹೆಚ್ಚಳವಾಗಲಿದೆ. ಈವರೆಗೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹35 ಪಾವತಿಸಲಾಗುತ್ತಿತ್ತು. ಇದೀಗ ₹7 ಹೆಚ್ಚಳವಾಗುವುದರಿಂದ ಮೂಲ ಹಾಲಿನ ದರ ₹42ಕ್ಕೆ ಏರಿಕೆಯಾಗಲಿದೆ.
ಇದರ ಜೊತೆಗೆ ರೈತರಿಗೆ ಈಗಾಗಲೇ ನೀಡಲಾಗುತ್ತಿರುವ ₹5 ಪ್ರೋತ್ಸಾಹ ಧನವನ್ನು ಸೇರಿಸಿದರೆ, ಒಟ್ಟು ಪ್ರತಿ ಲೀಟರ್ ಹಾಲಿಗೆ ರೈತರಿಗೆ ₹47 ದೊರೆಯಲಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.
ನಂದಿನಿ ಹಾಲಿನ ದರ ಏರಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಂಬಲ ನೀಡುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
Nandini Milk Price: ನವೆಂಬರ್ 1ರಿಂದ ಹೊಸ ದರ
ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲೇ ಒಪ್ಪಿಗೆ ದೊರೆತಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿತ್ತು.
Also Read>> ರೈತರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! 6 ಬೆಳೆಗಳ MSP ಹೆಚ್ಚಳ, ಕುಸುಬೆ ಬೆಲೆಗೆ ಭಾರೀ ಏರಿಕೆ!
ಇದೀಗ ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಸರ್ಕಾರ ದರ ಏರಿಕೆಗೆ ಅಂತಿಮ ಅನುಮೋದನೆ ನೀಡಿದೆ. ಹೀಗಾಗಿ ನವೆಂಬರ್ 1ರಿಂದ ನಂದಿನಿ ಹಾಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ.
ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳಲಿದ್ದು, ಮತ್ತೊಂದೆಡೆ ಹಾಲು ಉತ್ಪಾದಕರಿಗೆ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆಯಿದೆ. ಹಾಲಿನ ದರ ಪರಿಷ್ಕರಣೆಯ ಸಂಪೂರ್ಣ ಪರಿಣಾಮ ನವೆಂಬರ್ 1ರಿಂದ ಗ್ರಾಹಕರಿಗೆ ಅನ್ವಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









